Friday, November 21, 2014

ಸಾರ್ವಭೌಮತ್ವದ ಎಲ್ಲೆ ಮೀರಿ


ನಮ್ಮ ಹಳೆಯ ವೈರಿಯೊಡನೆ ಸ್ನೇಹದ ಮಾತುಕತೆಗೆ ಕುಳಿತುಕೊಳ್ಳುವ ಸಂಧರ್ಭ ಬಂದರೆ ಕೂಡಲೇ ಅಧೀರರಾಗುತ್ತೇವೆ. ಅದನ್ನು ಸಾಧ್ಯವಾದಷ್ಟು ತಪ್ಪಿಸುವುದಕ್ಕೆ ಪ್ರಯತ್ನಿಸುತ್ತೇವೆ; ಅದು ಅನಿವಾರ್ಯವಾದರೆ ಮೈಯೆಲ್ಲ ಕಣ್ಣಾಗಿ ಎಲ್ಲ ರೀತಿಯ ರಕ್ಷಣಾ ತಂತ್ರದೊಂದಿಗೆ, ಯಾವ ಕ್ಷಣದಲ್ಲೂ ಬಂದೊದಗುವ ತುರ್ತಿಗೆ ಸಿದ್ಧರಾಗಿ ಕೂರುತ್ತೇವೆ. ನಮ್ಮ ಎಲ್ಲ ಇಂದ್ರಿಯಗಳು ಬಂದೊದಗಬಹುದಾದ ಅಪಾಯದ ಸುಳಿವಿನ ನಿರೀಕ್ಷೆಯಲ್ಲೇ ಉಳಿಯುತ್ತವೆ. ಇಂಥ ಆತಂಕ ಭರಿತ ಸ್ಥಿತಿಯಲ್ಲಿ ಮಾತಿನ ನಡುವಿನ ಸ್ನೇಹದ ಮಾತುಗಳು ಕೇಳದೆ ಹೋಗುತ್ತವೆ. ಒಳ್ಳೆಯ ಮಾತುಗಳೆಲ್ಲ ಪಿತೂರಿಯಂತೆ ಭಾಸವಾಗುತ್ತವೆ.  ಅಪನಂಬಿಕೆಯ ಈ ಹೊಸಿಲಲ್ಲಿ ಯಾವ ಮಾತುಕತೆಗಳು  ಕುದುರಲಾರವು. 



ಮೊನ್ನೆ, 2014 ರ ಸೆಪ್ಟೆಂಬರ್ 15 ರಂದು ನಲ್ಲಿ ಚೀನಾ ದೇಶದ ಅಧ್ಯಕ್ಷರು ಭಾರತಕ್ಕೆ ಭೇಟಿಯಿತ್ತ ಸಮಯದಲ್ಲಿ ಇಂಥದ್ದೇ ಆತಂಕ ಭರಿತ ಕ್ಷಣಗಳಿದ್ದವು. ಆರಂಭವಾದ ದ್ವಿಪಕ್ಷೀಯ ಮಾತುಕತೆಯ ನಡುವಲ್ಲಿ  ಚೀನಾದ ಸೇನೆಯು ಲಡಾಕ್ನ ಸೀಮೆಯೊಳಗೆ  ಕಾಣಿಸಿಕೊಂಡಿದ್ದು ಎರಡೂ ದೇಶದ ಮುಖ್ಯಸ್ಥರಿಗೆ ಇರುಸು ಮುರುಸಾಯಿತು. ತಕ್ಷಣ ಇದನ್ನು  ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತಂದ ವಿಷಯವನ್ನಾಗಿ ಗ್ರಹಿಸಲಾಯ್ತು.  ನಮ್ಮ ಪ್ರಧಾನ ಮಂತ್ರಿಗಳು ತಾವೇ ಮುಂದಾಗಿ, ಇಂತಹ ಸಣ್ಣ ಸಣ್ಣ ಘಟನೆಗಳು ಬಹು ದೊಡ್ಡ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತವೆ; ಹಲ್ಲೊಂದರ ನೋವು ಇಡೀ ಶರೀರವನ್ನೇ ನಿಶ್ಕ್ರಿಯಗೊಳಿಸುತ್ತದೆ ಎಂದು ಖಡಕ್ಕಾಗಿ ಚೀನಾದ ಅಧ್ಯಕ್ಷರಿಗೆ ತಿಳಿಸಲೇಬೇಕಾಯ್ತು. ಇದಕ್ಕೆ ಪ್ರತಿಯಾಗಿ ಚೀನಾದ ಅಧ್ಯಕ್ಷರು ಲಡಾಕ್ ನಿಂದ ಹಿಂದೆಗೆಯಲು ತಮ್ಮ ಸೇನೆಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ 24 ಗಂಟೆಗಳ ತರುವಾಯವೂ ಅವರ ಸೇನೆಯು ಹಿಂದಿರುಗದಿದ್ದುದು ನಿಜಕ್ಕೂ ಆತಂಕಕಾರಿಯಾಗಿತ್ತು.  ಇದನ್ನು ಎರಡೂ ದೇಶಗಳು ಸಾಧಿಸಬಹುದಾಗಿದ್ದ ಉತ್ತಮ ರಾಜತಾಂತ್ರಿಕ ಸಂಬಂಧಗಳು ತನ್ಮೂಲಕ ಆಗಬಹುದಿದ್ದ ಆರ್ಥಿಕ ಒಪ್ಪಂದಗಳು, ಪರಸ್ಪರ ಅಭಿವೃದ್ಧಿಕಾರ್ಯಗಳು ಮೂಲೆಗೆ ಬಿದ್ದು ಎರಡೂ ದೇಶಗಳು ಸರ್ವತೋಮುಖ ಅಭಿವೃದ್ಧಿಯನ್ನು ಕಾಣಬಹುದಾಗಿದ್ದ ಈ ಹೊತ್ತಿನ, ಅಷ್ಟೇ ಏಕೆ, ಈ ಶತಮಾನದ, ಕಳೆದುಕೊಂಡ ಒಂದು ಅಭೂತಪೂರ್ವ ಅವಕಾಶವೆಂಬುದಾಗಿ ವಿಷ್ಲೇಶಿಸಲಾಯ್ತು.  ಎರಡೂ ದೇಶಗಳೂ ಒಂದೊಂದು ರೀತಿಯಲ್ಲಿ ಶಕ್ತಿಯುತವಾಗಿವೆ. ಚೀನಾ ದೇಶವು ಇಂದು ಮೂಲಭೂತ ಸೌಕರ್ಯನಿರ್ಮಾಣದ, ಉತ್ಪಾದನೆಯ ದೈತ್ಯ ಶಕ್ತಿಯಾಗಿ ನಿಂತಿದೆ; ಸಮರ್ಥವಾಗಿ ಸೂಪರ್ ಹೈವೆಗಳನ್ನು, ಸೂಪರ್ ಫಾಸ್ಟ್ ರೈಲು ದಾರಿಗಳನ್ನು, ಟ್ರೈನುಗಳನ್ನು, ಕನಿಷ್ಠ ವೆಚ್ಚದ ಪವರ್ ಸ್ಟೇಷನ್ ಗಳನ್ನು ನಿರ್ಮಾಣ ಮಾಡುವ ಸಾಮರ್ಥ್ಯ ಹೊಂದಿದೆ.  ಅಷ್ಟೇ ಅಲ್ಲ ಇವುಗಳ ನಿರ್ಮಾಣಕ್ಕೆ ಬೇಕಾಗುವ ಆರ್ಥಿಕ ಸಹಕಾರವನ್ನು ನೀಡುವ ಶಕ್ತಿಯನ್ನೂ ಹೊಂದಿದೆ.  ಭಾರತಕ್ಕೆ ತುರ್ತಾಗಿ ಈಗ ಇಂಥಹ ಸೂಪರ್ ಹೈವೆಗಳು, ಸೂಪರ್ ಫಾಸ್ಟ್ ಟ್ರೈನುಗಳು, ಪವರ್ ಸ್ಟೇಷನ್ ಗಳ, ಅವುಗಳ ನಿರ್ಮಾಣಕ್ಕೆ ತಗಲುವ ಆರ್ಥಿಕ ಸಂಪನ್ಮೂಲಗಳ ಅಗತ್ಯವಿದೆ.  ಹಾಗೆಯೇ ಭಾರತದಲ್ಲಿ ಚೀನಾಕ್ಕೆ ಈ ಹೊತ್ತಿಗೆ ಅಗತ್ಯವಿರುವ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ, ಶೈಕ್ಷಣಿಕ ಸಂಪತ್ತು, ತಂತ್ರಾಂಶ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಮುಖ್ಯವಾಗಿ ಚೀನಾದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಇಂಗ್ಲಿಷ್ ಶಿಕ್ಷಕರ ಅಗತ್ಯವಿದೆ. ಚೀನಾದೇಶವು ಭೌಗೋಳೀಕರಣದ ಈ ಹೊತ್ತಿನಲ್ಲಿ ಇಂಗ್ಲೀಷ್ ಶಿಕ್ಷಣದ ಅಗತ್ಯವನ್ನು  ಚೆನ್ನಾಗಿ ಮನಗಂಡಿದೆ. ಹೀಗೆ  ಎರಡೂ ದೇಶಗಳು ತಮ್ಮ ತಮ್ಮ ಸಾಮರ್ಥ್ಯಗಳ ಸಂಕ್ರಮಣದಲ್ಲಿ ಜೊತೆಗೂಡಿ ಹಿಂದೆಂದೂ ಕಾಣದ ಅಭೂತಪೂರ್ವ ಅಭಿವೃದ್ಧಿಯನ್ನು ಕಾಣುವ, ತನ್ಮೂಲಕ ಜಾಗತಿಕ ದೈತ್ಯ ಶಕ್ತಿಯಾಗಿ ಹೊರ ಹೊಮ್ಮುವ ಕಾಲಘಟ್ಟದಲ್ಲಿ ಬಂದು ನಿಂತಿವೆ.   ಸಂಕ್ರಮಣದ ಈ ಹೊತ್ತಿನ, ಈ ಶತಮಾನದ ಅವಕಾಶವು ಉಭಯ ದೇಶಗಳ ಆ ‘ವೆಸ್ಟ್ ಫಾಲಿನ್ ಸಾರ್ವಭೌಮತ್ವದ’ ಪ್ರತಿಷ್ಠೆಯ ಗುಂಗಿನಲ್ಲಿ ಕಳೆದು ಹೋಯಿತೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.    

ಅಷ್ಟಕ್ಕೂ ಈ ಸಾರ್ವಭೌಮತ್ವದ ಹಿಡಿಕೆಗೆ, ಅದು ಒಡ್ಡುವ ಸಂದಿಗ್ಧಕ್ಕೆ ದೇಶಗಳು ಸಿಲುಕಿ ಹೀಗೆ ನಲುಗುವುದೇಕೆ? ಅಭಿವೃದ್ಧಿಗೆ ಹಿನ್ನಡೆಯಾದರೂ ಸರಿ, ನಮ್ಮ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಕೂಡದು ಎಂದು ಚಡಪಡಿಸುತ್ತೇವೆ.  ಏನಿದು ಸಾರ್ವಭೌಮತ್ವ? ಇದರ ಮೂಲವೇನು? ಮೌಲ್ಯವೇನು ಎಂದು ಕೆದಕಿದರೆ ಇತಿಹಾಸವು ನಮ್ಮನ್ನು ಯುರೋಪಿನ ಹದಿನೇಳನೇ ಶತಮಾನದ ಪೂರ್ವಾರ್ಧಕ್ಕೆ ತಂದು ನಿಲ್ಲಿಸುತ್ತದೆ. ತಮ್ಮ ದೇಶಗಳ, ಗಡಿಗಳ ಸ್ವಾಮ್ಯದ ಕಲಹದಲ್ಲಿ ಸಿಲುಕಿ  ಸತತ ಮುವ್ವತ್ತು ವರ್ಷಗಳ ಯುದ್ಧದಲ್ಲಿ ಕಂಗೆಟ್ಟು ಹೋಗಿದ್ದ  ಅಂದಿನ ರೋಮ್, ಸ್ಪೇನ್, ಫ್ರಾನ್ಸ್, ಸ್ವೀಡನ್ ಮತ್ತು ಡಚ್ ದೇಶಗಳು ಕೊನೆಗೆ ಒಂದು ಒಮ್ಮತಕ್ಕೆ ಬರುತ್ತವೆ. ಅದನ್ನು 1648 ರ ವೆಸ್ಟ್ ಫಾಲಿಯನ್ ಶಾಂತಿ ಒಪ್ಪಂದವೆಂದು ಕರೆಯಲಾಗುತ್ತದೆ. ಅದರಂತೆ. ಈ ದೇಶಗಳು ಆಯಾ ದೇಶಗಳ ರಾಜ್ಯ, ಗಡಿ, ಆಂತರಿಕ ರಾಜಕೀಯ, ಧಾರ್ಮಿಕ, ಆರ್ಥಿಕ ವಿಚಾರಗಳಲ್ಲಿ ಬೇರೆಯವರು ಹಸ್ತಕ್ಷೇಪ ಮಾಡದಂತೆ ತಾವೇ ತಮ್ಮ ಇಚ್ಛೆಯಂತೆ ನಡೆದುಕೊಳ್ಳುವುದು ಮತ್ತು ಉಳಿದ ದೇಶಗಳನ್ನು ಅದರಂತೆಯೇ ಗೌರವಿಸುವುದು.  ಈ ಒಡಂಬಡಿಕೆಯ ನಂತರ ಬಹುತೇಕ ಯುರೋಪಿನಲ್ಲಿ ಇಂತಹ ಕಲಹಗಳು ನಿಂತು ದೇಶಗಳು ಅಭಿವೃದ್ಧಿಯತ್ತ ಗಮನ ಹರಿಸತೊಡಗುತ್ತವೆ. ಹೀಗೆ ಅಂದು ಯುರೋಪಿನ ದೇಶಗಳು  ಪಡೆದ ಸಾರ್ವಭೌಮತ್ವವನ್ನು ವೆಸ್ಟ್ ಫಾಲಿಯನ್ ಸಾರ್ವಭೌಮತ್ವವೆಂದು ಕರೆಯಲಾಗುತ್ತದೆ. ಈ ಒಡಂಬಡಿಕೆಯಿಂದಲೇ ಮುಂದೆ ಡಚ್ಚರು,  ಫ್ರೆಂಚರು,  ಪೋರ್ಚುಗೀಸರು ಮತ್ತು ಇಂಗ್ಲೀಷರು ತಮ್ಮ  ವಸಾಹತುಗಳನ್ನು ಯುರೋಪಿನಾಚೆ ಸ್ಥಾಪಿಸಿದ್ದು. ಹೀಗೆ ಇವರೆಲ್ಲ ಒಬ್ಬೊಬ್ಬರಾಗಿ ಭಾರತಕ್ಕೂ ಬಂದು ಅಂತಿಮವಾಗಿ ಇಂಗ್ಲೀಷರು ಇಲ್ಲಿ ನೆಲೆ ನಿಂತರು. ಹೀಗೆ ಯುರೋಪಿನಲ್ಲಿ ಭೌಗೋಳಿಕವಾಗಿ ಚಿಕ್ಕದಾಗಿದ್ದ ದೇಶಗಳು ತಮ್ಮ ನಾಡಿನ ಶಾಂತಿಗೆ, ಅಭಿವೃದ್ಧಿಗೆ ನೆರೆರಾಷ್ಟ್ರಗಳೊಂದಿಗೆ ಸಹಬಾಳ್ವೆಯ ಒಂಡಂಬಡಿಕೆಯೊಂದಿಗೆ ತಮ್ಮ ಸಾರ್ವಭೌಮತ್ವವನ್ನು ಒಂದು ಪ್ರತಿಷ್ಠೆಯ ವಿಷಯವನ್ನಾಗಿಸದೆ, ಅದನ್ನು ಮುಂದೆ ಆರ್ಥಿಕ ಭೌಗೋಳೀಕರಣದ ಹೊತ್ತಿಗೆ ಇನ್ನಷ್ಟು ವಿಕಾಸ ಹೊಂದುವಂತೆ ಮಾಡಿ ಇಂದು ಆ ದೇಶಗಳು ಸಮಗ್ರ ಯುರೋಪಿನ ಆರ್ಥಿಕ ಅಭಿವೃದ್ಧಿಗೆ ಯುರೋಪಿನಾದ್ಯಂತ ಒಂದೇ ಕರೆನ್ಸಿಯನ್ನು ಬಳಸುವತ್ತ ಸಾಗಿವೆ. ಇಂದು ಯುರೋಪಿನ ದೇಶಗಳಲ್ಲಿ  ನಮ್ಮ ನೆರೆಹೊರೆಯ ದೇಶಗಳಲ್ಲಿರುವಂತೆ ಆತಂಕದ ಪರಿಸ್ಥಿತಿಯಿಲ್ಲ. ಏಷ್ಯಾದ ದೇಶಗಳು ಇನ್ನೂ 17 ನೇ ಶತಮಾನದ ವೆಸ್ಟ್ ಫಾಲಿಯನ್ ಸಾರ್ವಭೌಮತ್ವದ ಹಿಡಿಕೆಯಲ್ಲಿ ಸಿಕ್ಕಿಕೊಂಡು ನಲುಗುತ್ತಿವೆ. ಪರಸ್ಪರ ಅಭಿವೃದ್ಧಿಯ ಅವಕಾಶಗಳನ್ನೂ ತಮ್ಮ ಪ್ರತಿಷ್ಠೆಯಲ್ಲಿ ಹೂತು ಹಾಕುವಂಥ ಮನಸ್ಥಿತಿಯಲ್ಲಿವೆ. ಇದರ ಸಿಲುಕಿನಲ್ಲಿ  ಸಿಕ್ಕಿ ಇಡೀ ಏಷ್ಯಾದಲ್ಲಿ ವೆಚ್ಚವಾಗುವ ರಕ್ಷಣಾ ಬಜೆಟ್ ಸಹ ಏರುತ್ತಿದೆ;  ಇಷ್ಟೂ ಹಣವು ಅಭಿವೃದ್ಧಿಗೆ ದೊರೆತರೆ ಹೇಗೆ ಎಂಬ ಆಲೋಚನೆ ಮೂಡದಷ್ಟು ಗಾಢವಾಗಿ ಕಳೆದುಹೋಗಿವೆ.

ವಸುದೈವಕುಟುಂಬಕಂ ಎಂದರೆ ಇದೇ ಅಲ್ಲವೆ?

ಹಾಗೆಂದು ಇದು ಒಂದು ದೇಶದ ಕೈಯಲ್ಲಿ ಇರುವ ಆಯ್ಕೆಯಲ್ಲ; ನೆರೆಯ ಎಲ್ಲ ದೇಶಗಳೂ ಸಹಕರಿಸಬೇಕು.

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?


Wednesday, November 19, 2014

ಭಾಷಾ ಮಾಧ್ಯಮದ ಸಿಲುಕಿನಲ್ಲಿ ಕನ್ನಡದ ಕಂದಮ್ಮಗಳು

" ದ್ಯಾಮವ್ವಾ ಏನ್ ಮಗನ್ನೂ ಕೆಲ್ಸಕ್ಕೆ  ಕರ್ಕೊಂಬಂದಂಗೈತೆ, ಏನ್ ಇಸ್ಕೂಲ್ ಬಿಡ್ಸಿದ್ಯೊ, ಇಲ್ಲಾ ಅವನೇ ಬಿಟ್ನಾ? "
"ಇಲ್ಲ ಕಣ್ರವ್ವ ಫೇಲಾಗೈತೆ, ಅದಕ್ಕೆ ವೋಗಿಲ್ಲ; ಎಸಲ್ಸಿ ತಂಕಾ ಚೆನ್ನಾಗಿ ಓದ್ತು, ಈಗ ಫೇಲಾಗ್ ಕುಂತೈತೆ.
ಬ್ಯಾಡ ಕಣಪ್ಪಾ ಆಂದ್ರು ಕೇಳ್ಲಿಲ್ಲ, ಡಾಕುಟ್ರಾಗ್ತೀನಿ,  ಸುಮ್ಕಿರವ್ವ ಅಂದು ಈಗ ಪಿವುಸೀಲೇ ಫೇಲಾಗ್ ಕುಂತೈತೆ...
ಎಲ್ಲಾ ಇಂಗ್ಲೀಸ್ನಾಗೇ ಬರೀಬೇಕಂತೆ, ಇದಕ್ ಇಂಗ್ಲೀಸು ಬರಲ್ದು, ಫೇಲಾಗೈತೆ.
ಕನ್ನಡದಾಗೆ ಆಗಿದ್ರೆ ಚನ್ನಾಗ್ ಬರಿತಿದ್ದೆ ಕಣವ್ವ ಅಂತು...;  ನಮ್ ಕನ್ನಡದಾಗೆ ಡಾಕುಟ್ರು ಓದಕಾಗಕಿಲ್ವ?
ಪರಂಗಿಯವ್ರ ಕಾಟ ಯಾವತ್ತು ತೀರ್ತದೋ ಏನೋ...? "



ಹೌದಲ್ಲವೆ!  ಕನ್ನಡದಲ್ಲಿ ವಿಜ್ಞಾನ, ಮೆಡಿಸಿನ್, ಇಂಜಿನಿಯರಿಂಗ್, ಮ್ಯಾನೇಜ್ಮೆಂಟ್, ಕಲಿಯುವ ಹಾಗೆ ಇದ್ದಿದ್ದರೆ ನಮ್ಮ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಎಲ್ಲ ಹುಡುಗರು ನೀರು ಕುಡಿದ ಹಾಗೆ ಓದಿ ಪಾಸಾಗುತ್ತಿದ್ದರು.  ಈ ಸ್ಥಿತಿಗೆ ರಜನಿಸಾರ್ ಸಿನಿಮಾದಂತೆ ಒಂದು ರಂಜನೀಯ ಟ್ವಿಸ್ಟ್ ಕೊಟ್ಟು ಹೀಗೊಂದು ಕಲ್ಪನಾ ಪ್ರಪಂಚಕ್ಕೆ ಹೋಗಿಬರೋಣ.  ಮುಂದಿನ ಶೈಕ್ಷಣಿಕ ವರ್ಷದಿಂದ ನಮ್ಮ ರಾಜ್ಯದ ಎಲ್ಲ ವಿಜ್ಞಾನ, ಇಂಜಿನಿಯರಿಂಗ್, ಮೆಡಿಸಿನ್, ಮ್ಯಾನೇಜ್ಮೆಂಟ್, ಕಾನೂನು ಹಾಗೂ ಇತರೆ ಎಲ್ಲ ಕೋರ್ಸಗಳನ್ನು ಕನ್ನಡ ಮಾಧ್ಯಮದಲ್ಲಿ ಮಾತ್ರ ಭೋಧಿಸಲಾಗುವುದೆಂಬ ಫರ್ಮಾನು ಹೊರಬಿದ್ದು ಅದರಂತೆ ಎಲ್ಲ ವಿದ್ಯಾರ್ಥಿಗಳು ಈ ಕನ್ನಡ ಮಾಧ್ಯಮದ ಕೋರ್ಸುಗಳಿಗೆ ಸೇರಿದರೆ, ಇನ್ನು ಫೇಲಾಗುವ ಸರದಿ ಕನ್ನಡದಲ್ಲಿ ಬರೆಯಲಾಗದೆ ಹೋಗುವ ಕನ್ನಡೇತರ, ಇಂಗ್ಲಿಷ್ ಮಾಧ್ಯಮದ ಹುಡುಗರದು!, ಅಲ್ಲವೆ?  ಹೀಗೆ ಇಂಗ್ಲಿಷ್ ಮಾಧ್ಯಮದ ಹುಡುಗರನ್ನು ಫೇಲಾಗುವಂತೆ ಮಾಡುವ  ರೋಚಕ ಆಲೋಚನೆ ಹುಟ್ಟಿದ್ದೇ ಕನ್ನಡದ ಕಂದಮ್ಮಗಳು ಇಂಗ್ಲಿಷ್ ಬಾರದೆ, ಇಂಗ್ಲಿಷ್ ಮಾಧ್ಯಮದ ಉನ್ನತ ಶಿಕ್ಷಣದ ಕೋರ್ಸುಗಳಲ್ಲಿ  ನಿರಂತರವಾಗಿ  ಫೇಲಾಗುವಂತೆ ಹೊಸೆದು ಇಡಲಾಗಿರುವ ಈ ನಯವಂಚಕ ತಂತ್ರದಿಂದ. ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿ, ಕನ್ನಡ ಮಾಧ್ಯಮದಲ್ಲಿ ಕಲಿಯಿರಿ, ಕಲಿಸಿರಿ ಎಂದು ಬೊಬ್ಬೆ ಹೊಡೆಯುವವರು ಉನ್ನತ ಶಿಕ್ಷಣವನ್ನೂ ಕನ್ನಡದಲ್ಲಿ ಕಲಿಯಿರಿ, ಕಲಿಸಿರಿ  ಎಂದೇಕೆ ಹೇಳುವುದಿಲ್ಲ? ಅದಕ್ಕೆ ಪೂರಕವಾಗಿ ಕನ್ನಡ ಮಾಧ್ಯಮದ ವಿಜ್ಞಾನ, ಮೆಡಿಸಿನ್, ಇಂಜಿನಿಯರಿಂಗ್, ಮ್ಯಾನೇಜ್ಮೆಂಟ್ ನಲ್ಲಿ  ಉನ್ನತ ಶಿಕ್ಷಣದ ಕೋರ್ಸುಗಳನ್ನು ತೆರೆಯಬೇಕೆಂದು ಏಕೆ ಆಗ್ರಹಿಸುವುದಿಲ್ಲ?  ಈ ಬಗ್ಗೆ ಹಾರಿಕೆಯ ಉತ್ತರ ಕೊಡುವುದೋ ಇಲ್ಲ ಜಾಣ ಮೌನವಹಿಸುವುದು ನಯವಂಚನೆಯಲ್ಲವೆ?  ಕನ್ಡಡದ ಕಂದಮ್ಮಗಳಿಗೇಕೆ ಕಾಣದ ಕಡಲಲ್ಲಿ ಈಜುವ, ಯಾಮಾರಿದರೆ ಮುಳುಗೇ ಹೋಗುವ ಈ ಪರಿಯ ಶಿಕ್ಷೆ?

ಫ್ರಾನ್ಸ್, ಜಪಾನ್, ರಷ್ಯಾ, ಜರ್ಮನಿ ದೇಶಗಳಲ್ಲಿ ತಮ್ಮ ತಮ್ಮ ಭಾಷೆಗಳಲ್ಲಿಯೇ ಎಲ್ಲ ಉನ್ನತ ಶಿಕ್ಷಣವನ್ನು  ಕಲಿಸಿ ಅಪ್ರತಿಮ ವಿಜ್ಞಾನಿ, ಇಂಜಿನಿಯರ್, ಡಾಕ್ಟರ್, ಮ್ಯಾನೇಜರ್, ಲಾಯರ್  ಮುಂತಾದ ವೃತ್ತಿಪರರನ್ನು ಹೊರತಂದಿಲ್ಲವೆ? ಪ್ರಾಥಮಿಕ ಶಿಕ್ಷಣವನ್ನು ಕನ್ನಡದ ಉಳಿವಿಗಾಗಿ ಕನ್ನಡ ಮಾಧ್ಯಮದಲ್ಲಿ ನೀಡಬೇಕೆಂದು ಆಗ್ರಹಿಸುವವರು ಮುಂದೆ ಹೋಗಿ ಉನ್ನತ ಶಿಕ್ಷಣವೂ ಕನ್ನಡದಲ್ಲಿ ಇರಬೇಕು, ಕನ್ನಡದ ಉಳಿವಿಗೆ ಹೆಗಲು ಕೊಟ್ಟ ಮಕ್ಕಳಿಗೆ ಸುಲಭವಾಗಿ ಉನ್ನತ ಶಿಕ್ಷಣವು ಅವರಿಗೆ ತಿಳಿದಿರುವ ಮಾಧ್ಯಮವಾದ ಕನ್ನಡದಲ್ಲಿಯೇ  ನಿಲುಕಬೇಕು ಎಂದು ಏಕೆ ಆಗ್ರಹಿಸುವುದಿಲ್ಲ? ಈ ಬಗ್ಗೆ ಇಲ್ಲಿಯವರೆಗೆ ಕನ್ನಡ ಮಾಧ್ಯಮದ ವಕ್ತಾರರು ಪ್ರಸ್ತಾಪ ಮಾಡದಿರುವುದು ಆಶ್ಚರ್ಯ! ಪ್ರಾಥಮಿಕ ಶಿಕ್ಷಣವನ್ನು ಕನ್ನಡದ ಮಾಧ್ಯಮದಲ್ಲಿ ಕಲಿತ ಕನ್ನಡ ಮಕ್ಕಳಿಗೆ, ಸರ್ಕಾರವು ತನ್ನ ವೆಚ್ಚದಲ್ಲಿ ನೀಡುವ ಈ ಶ್ರೇಷ್ಠ  ಉನ್ನತ ಶಿಕ್ಷಣ ಬೇಡವೆಂದೆ?   ನಮ್ಮಲ್ಲಿ ಉನ್ನತ  ಶಿಕ್ಷಣದ ಕೋರ್ಸುಗಳನ್ನು ಕನ್ನಡ ಮಾಧ್ಯಮದಲ್ಲಿ ನೀಡಲು ಸಂಪನ್ಮೂಲಗಳಗಳ ಕೊರತೆ ಇದ್ದರೆ ಅವನ್ನು ಕ್ರೋಢೀಕರಿಸಲು ಯಾವ ಅಡಚಣೆ ಇದೆ?  ಈಗಿನ ಪರಿಸ್ಥಿತಿಯಲ್ಲಿ ಕ್ರೋಢೀಕರಿಸಲು ಸಾಧ್ಯವೇ ಇಲ್ಲ ಎಂದಾದರೆ ಅಥವಾ ಉನ್ನತ ಮತ್ತು ವೃತ್ತಿಪರ ಶಿಕ್ಷಣವನ್ನು  ಭಾರತದಂತಹ ಬಹುಭಾಷಾ ದೇಶದಲ್ಲಿ, ಒಂದು ರಾಜ್ಯದವರು ಮತ್ತೊಂದು ರಾಜ್ಯದಲ್ಲಿ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಇಂಗ್ಲಿಷನಂಥ ಒಂದು ಸರ್ವ-ಸಂಪರ್ಕ ಭಾಷೆಯಲ್ಲಿ ಇರಬೇಕೆಂದು ಅಪೇಕ್ಷೆ ಪಟ್ಟರೆ ಅದೇ ಭಾಷೆಯಲ್ಲಿ ಎಲ್ಲರೂ ಓದಿ ಬರೆಯುವಂಥ ಸ್ಥಿತಿ ನಿರ್ಮಾಣಮಾಡುವುದು ಕನಿಷ್ಠ ಅಗತ್ಯ ಮತ್ತು ಜವಾಬ್ದಾರಿಯಲ್ಲವೆ?  ಬದಲಿಗೆ ಈ ಸರ್ವ-ಸಂಪರ್ಕ ಭಾಷೆಯಾದ ಇಂಗ್ಲಿಷ್ ಮಾಧ್ಯಮದಲ್ಲಿ ಕೆಲವೇ ಜನರು ಕಲಿತು, ಉಳಿದ ಕನ್ನಡ ಮಾಧ್ಯಮದ ಬಹುಸಂಖ್ಯಾತರ ಮೇಲೆ ಸವಾರಿ ಮಾಡುವಂತಹ ಸ್ಥಿತಿಯನ್ನೇಕೆ ನಿರ್ಮಿಸಲಾಗಿದೆ?  ಕನ್ನಡವನ್ನು ಉಳಿಸಿ ಬೆಳೆಸಲು ಕಲಿಯುವ ಕನ್ನಡದ ಕಂದಮ್ಮಗಳು ಮಾತ್ರ ಹರಕೆಯ ಕುರಿಗಳಾಗಬೇಕೆ?  ಅಸಲಿಗೆ, ಮಾತೃಭಾಷೆಯಲ್ಲಿಯೇ ಶಿಕ್ಷಣವಾಗಬೇಕು ಎಂಬುದೇ ಹುರುಳಿಲ್ಲದ್ದಾಗಿದೆ. ಮಾತೃಭಾಷೆಯಲ್ಲಿ ಅಥವ ಮನೆಯ ಮಾತಿನಲ್ಲಿ  ಕಲಿಸುವುದು ಎಳೆಯ ಮಕ್ಕಳ ಕಲಿಕೆಗೆ ಸಹಕಾರಿಯಾಗುವುದು, ಆದುದರಿಂದ ಕನ್ನಡದ ಮಾಧ್ಯಮದಲ್ಲಿಯೇ ಕಲಿಸಬೇಕೆಂದು ಹೇಳುವವರು, ಮನೆಯಲ್ಲಿ ತುಳು, ಕೊಡವ, ಹವ್ಯಕ, ಕೊಂಕಣಿ ಮತ್ತು ಲಂಬಾಣಿ ಭಾಷೆಯನ್ನು ಮಾತನಾಡುವ ಮಕ್ಕಳು ಯಾವ ಭಾಷೆಯಲ್ಲಿ ಕಲಿಯಬೇಕು ಎಂಬ ವಿಷಯದಲ್ಲಿ ಜಾಣ ಮೌನ ವಹಿಸುತ್ತಾರೆ.

ನಮ್ಮ ನಾಡಿನಲ್ಲಿ ಏಕರೂಪಿ ಪ್ರಾಥಮಿಕ ಶಿಕ್ಷಣವಿಲ್ಲ.  ಉಳ್ಳವರು ಹಣ ತೆತ್ತು  ತಮ್ಮ ಮಕ್ಕಳನ್ನು ಪ್ರತಿಷ್ಠಿತ ಇಂಗ್ಲಿಷ್ ಶಾಲೆಗೆ ಸೇರಿಸಿದರೆ, ಹಣವಿಲ್ಲದ ಬಡವರು, ಕೆಲವು ಬಾರಿ,  ಸೂರಿಲ್ಲದ ಏಕೋಪಾಧ್ಯಾಯ ಸರ್ಕಾರಿ ಕನ್ನಡ ಶಾಲೆಗೆ ಸೇರಿಸಬೇಕಾದ ಸ್ಥಿತಿ ಇದೆ. ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿರುವುದರಿಂದ, ನಾಡಿನ ಸಾಹಿತ್ಯವಲಯದ ಎಲ್ಲ ವರಿಷ್ಠರ ಆಗ್ರಹದಂತೆ ನಾಡಿನ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕೆಂಬ ಒತ್ತಾಸೆ ಸರ್ಕಾರಿ ಕನ್ನಡ ಶಾಲೆಗಳಿಗೆ ಮಾತ್ರ ಬಂದು ನಿಂತಿದೆ. ಅದು ಸಿರಿವಂತರ ಮಕ್ಕಳು ಹೋಗುವ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಜಾರಿಗೊಳ್ಳುವಲ್ಲಿ ವಿಫಲವಾಗಿದೆ. ಹೀಗೆ, ತಾರತಮ್ಯ ಪ್ರಾಥಮಿಕ ಶಿಕ್ಷಣದ ಹಿನ್ನೆಲೆಯಿಂದ ಬಂದ ಸಿರಿವಂತರ ಮತ್ತು ಬಡವರ ಮಕ್ಕಳು  ಮುಂದೆ  ಸರ್ಕಾರವೇ ನಡೆಸುವ ಇಂಗ್ಲಿಷ್ ಮಾಧ್ಯಮದ ಪ್ರತಿಷ್ಠಿತ ಉನ್ನತ ಶಿಕ್ಷಣ ಕೇಂದ್ರಗಳಾದ, IIT, AIIMS, IIM, IISC ಇತ್ಯಾದಿ  ಸಂಸ್ಥೆಗಳಿಗೆ ಪ್ರವೇಶಕೋರಿ ಅವು ನಡೆಸುವ  ಪ್ರವೇಶ ಪರೀಕ್ಷೆಯಲ್ಲಿ  ಒಟ್ಟಿಗೆ, ಒಂದು common level playing ground ಇಲ್ಲದಂಥ ಸ್ಥಿತಿಯಲ್ಲಿ, ಸ್ಪರ್ಧಿಸುತ್ತಾರೆ. ಈ ತಾರತಮ್ಯದ ಸ್ಪರ್ಧೆಯಲ್ಲಿ ವಿಜೇತರು ಯಾರು ಎಂದು ಹೇಳಬೇಕಾಗಿಲ್ಲ. ಸ್ಪರ್ಧೆಯ ಮುನ್ನವೇ ಅದು ತಿಳಿದಿರುತ್ತದೆ. ತಮಗೆ ಗೊತ್ತಿಲ್ಲದ ಭಾಷಾ ಮಾಧ್ಯಮದಲ್ಲಿ  ಸರಿಯಾಗಿ ಒಂದು ವಾಕ್ಯವನ್ನು ರಚಿಸಲು ಅಶಕ್ತರಾದ ಮಕ್ಕಳು ಇಡೀ ವಿಷಯವನ್ನು ಆ ಭಾಷೆಯಲ್ಲಿ ಬರೆದು ಉತ್ತೀರ್ಣರಾಗುವುದು ಸಾಧ್ಯವೆ?  ಸರಿಯಾದ ತಯಾರಿ ಇಲ್ಲದೆ ಏಕಾ ಏಕಿ ಕನ್ನಡದ ಮಾಧ್ಯಮದಲ್ಲಿ ಓದಿದ ಮಕ್ಕಳನ್ನು ಇಂಗ್ಲಿಷ್ ಭಾಷೆಯಲ್ಲಿ ನಡೆಯುವ ಪರೀಕ್ಷೆಯನ್ನು ಎದುರಿಸುವಂತೆ ನಿರೀಕ್ಷಿಸುವುದು ಶಕ್ಯವೆ? ಅಸಹಾಯಕ  ಬಡ ಗ್ರಾಮೀಣ ಮಕ್ಕಳು ಫೇಲಾಗಿ ಹೋಗುತ್ತಾರೆ.  ಮೊದಲಿಂದಲೂ ಇಂಗ್ಲಿಷ್ ನಲ್ಲಿ ಓದಿ, ಬರೆದು, ಮಾತನಾಡುವ ತಾಲೀಮು ನಡೆಸಿರುವ ಉಳ್ಳವರ ಮಕ್ಕಳು ಸಹಜವಾಗಿ ಇಂತಹ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಾರೆ.  ಉದಾಹರಣೆಗೆ ಸರ್ಕಾರಿ ವೆಚ್ಚದಲ್ಲಿ ನಡೆಯುವ   Indian Institutes of Management(IIMs) ಗಳು ಒಡ್ಡುವ ಪ್ರವೇಶ ಪರೀಕ್ಷೆಯ ಕಬ್ಬಿಣದ ಕಡಲೆಯಂಥ  ಇಂಗ್ಲಿಷ್ ಟೆಸ್ಟಿನಲ್ಲಿ ಕೆಲ ಇಂಗ್ಲಿಷ್ ಮಾಧ್ಯಮದ ಹುಡುಗರೇ ಫೇಲಾಗುವಂತಿರುವಾಗ,  ಸರ್ಕಾರಿ ಕನ್ನಡ ಶಾಲೆಯಿಂದ ಬಂದ ಮಕ್ಕಳು ಹೇಗೆ ಪಾಸಾಗುತ್ತಾರೆ?  ಇದು ಅವರನ್ನು ಅವಮಾನಕ್ಕೀಡುಮಾಡುವ ಸಂಗತಿಯಾಗಿದ್ದು ಇಂಗ್ಲಿಷ್ ಮಾಧ್ಯಮದಲ್ಲಿ ಓದದಿದ್ದುದು ತಪ್ಪಾಯಿತು ಎಂದು ಭಾವಿಸುವಂತೆ ಪ್ರೇರೇಪಿಸಿ ಕೀಳರಿಮೆಯನ್ನು ಉಂಟುಮಾಡುತ್ತಿದೆ. ಇನ್ನು ಸಹಜವಾಗಿ ಪ್ರತಿಷ್ಠಿತ ಖಾಸಗಿ ಇಂಗ್ಲಿಷ್ ಶಾಲೆಗಳಲ್ಲಿ ಕಲಿತ ಉಳ್ಳವರ ಮಕ್ಕಳೇ, ಸರ್ಕಾರ ನಡೆಸುವ ಈ ಪ್ರತಿಷ್ಠಿತ ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ಪ್ರವೇಶ ಪಡೆಯುತ್ತಾರೆ; ಏನಿದರ ಅರ್ಥ?  ಶ್ರೇಷ್ಠ ಉನ್ನತ ಶಿಕ್ಷಣವನ್ನು ಸರ್ಕಾರವೇ ಮುಂದೆ ನಿಂತು ಜನರ ತೆರಿಗೆ ಹಣದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿಬಂದ ಉಳ್ಳವರ ಮಕ್ಕಳಿಗೆ ಮಾತ್ರ ನೀಡಿದಂತಾಗಲಿಲ್ಲವೆ?  ಇದು ಮೆರಿಟ್ ಹೆಸರಿನಲ್ಲಿ ಕನ್ನಡದ ಉಳಿವಿಗಾಗಿ ಕನ್ನಡ ಮಾಧ್ಯಮದಲ್ಲಿ  ಓದಿಬಂದ ಬಡವರ ಮಕ್ಕಳು ಈ ಉನ್ನತ ಶಿಕ್ಷಣ ಕೇಂದ್ರಗಳ ಸನಿಹ ಸುಳಿಯದಂತೆ ಮಾಡಿರುವಂಥ ವ್ಯವಸ್ಥಿತ ಸಂಚಲ್ಲವೆ?  ಹಾಗಿಲ್ಲದಿದ್ದರೆ, ಸರ್ಕಾರವೇ ನಡೆಸುವ ಈ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ಉಳಿವಿಗಾಗಿ ಹೆಗಲು ಕೊಟ್ಟ ಈ ಅಮಾಯಕ ಬಡ ಕನ್ನಡದ ಕಂದಮ್ಮಗಳು ಕಲಿತ ಕನ್ನಡ ಮಾಧ್ಯಮದಲ್ಲಿಯೇ ಉನ್ನತ ಶಿಕ್ಷಣವನ್ನು ಪಡೆಯುವಂತೆ ವ್ಯವಸ್ಥೆಯನ್ನು ಏಕೆ ರೂಪಿಸಿಲ್ಲ?   ಬಹುಭಾಷಾ ದೇಶವಾದ ಭಾರತದಲ್ಲಿ,  ಜಾಗತೀಕರಣದ ಈ ಹೊತ್ತಿನಲ್ಲಿ ಉನ್ನತ ಶಿಕ್ಷಣವನ್ನು ಸರ್ವ-ಸಂಪರ್ಕ ಭಾಷೆಯಾದ ಇಂಗ್ಲಿಷ್ ನಲ್ಲಿಯೇ ನೀಡಬೇಕಾದ ಅನಿವಾರ್ಯತೆ ಇದ್ದರೆ ಬಡವರ ಕನ್ನಡ ಕಂದಮ್ಮಗಳು ಈ ಇಂಗ್ಲಿಷ್ ಮಾಧ್ಯಮದ  ಉನ್ನತ ಶಿಕ್ಷಣವನ್ನು ಪಡೆಯಲು ಸಮರ್ಥರಾಗುವಂತೆ  ಅವರಿಗೂ ಪ್ರಾಥಮಿಕ ಶಿಕ್ಷಣವನ್ನು ಉಳ್ಳವರ ಮಕ್ಕಳಂತೆ ಇಂಗ್ಲಿಷ್ ನಲ್ಲಿ ಏಕೆ ನೀಡುತ್ತಿಲ್ಲ?  ಕನ್ನಡದ ಉದ್ಧಾರಕ್ಕೆ ಈ ನೆಲದ ಕನ್ನಡ ಮಕ್ಕಳು ಹರಕೆಯ ಕುರಿಗಳೆ?

ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವ ಪ್ರಯೋಗ ಶಾಲೆಯ ಗಿನ್ನಿ-ಪಿಗ್ಸಗಳಾಗಿವೆಯೆ ನಮ್ಮಈ  ಕನ್ನಡದ ಕಂದಮ್ಮಗಳು?  ಈ ನಾಡಿನ ಇತರ ಭಾಷೆಗಳಾದ  ತುಳು, ಕೊಂಕಣಿ, ಕೊಡವ, ಹವ್ಯಕ, ಮತ್ತು ಲಂಬಾಣಿ ಭಾಷೆಗಳು ಹೇಗೆ ಉಳಿದು ಬೆಳೆಯುತ್ತಿವೆ ಎನ್ನುವ ಕಡೆಗೆ ಗಮನ ಹರಿಸಿದರೆ, ಈ ನೆಲದ ಕನ್ನಡ ಮಕ್ಕಳು ಹರಕೆಯ ಕುರಿಗಳಾಗುವುದು ನಿಲ್ಲುತ್ತದೆ.

Thursday, November 13, 2014

ಬಿಳಿಯ ಮೈಬಣ್ಣದಾಚೆಯ ಸೌಂದರ್ಯ




ವಾಹ್! ಏನ್ ಚಂದ ಇದ್ದಾಳ್ರಿ ಆಕಿ!  ಕೈ ತೊಳ್ದು ಮುಟ್ಟಬೇಕ್ರಿ…
ಇಲ್ಲಿ ನೋಡಿ! ಎಂಥ ರೂಪವತಿ ಅಂತಿರಾ, ಹಾಲಿನಂಥ ಬಿಳುಪು; ಹೆಣ್ಣು ಅಂದರೆ ಹಾಗಿರಬೇಕು !!
ಎಂಬೆಲ್ಲಾ ಉದ್ಗಾರಗಳ ನಡುವೆ ಕೆಲವರಿಗೆ ಸಂಭ್ರಮ, ಕೆಲವರಿಗೆ ಸಂಕಟ.  “ ಗೌರಿ, ನೀನು ಎಷ್ಟು ಬೆಳ್ಳಗಿದ್ದೀಯೆ”  ಎಂದ ಕೂಡಲೆ ಅವಳು “ನಮ್ಮ ಅಜ್ಜಿ ಎಷ್ಟು ಬೆಳ್ಳಗಿದ್ರು ಅಂದ್ರೆ, ನಮ್ಮ ತಾತ ಅವರ ಮಾವನನ್ನು ತುಂಬ ಓಲೈಸಿ,  ಹಿಂದೆ ಓಡಾಡಿ, ಕಾಡಿ ಬೇಡಿ ಒಪ್ಪಿಸಿ, ನಮ್ಮ ಅಜ್ಜಿಯನ್ನು ಮದುವೆ ಆದ್ರಂತೆ. ನಮ್ಮ ತಾತ ಏನು ಕಡಿಮೆ ಇರಲಿಲ್ಲ ನೋಡಿ, ಅವ್ರೂ  ಕೆಂಪಗೆ ಎತ್ತರಕ್ಕೆ ಒಳ್ಳೆ ಸುರ ಸುಂದರಾಂಗ; ಆದ್ರೆ, ಅಷ್ಟೊಂದು ಸ್ಥಿತಿವಂತ ಅಲ್ಲ;  ಆದ್ರೂ ಕಷ್ಟ ಪಟ್ಟು ಬೆಳ್ಳಗಿರೋ ಹುಡುಗಿನೇ ಬೇಕು ಅಂತ ಓಡಾಡಿ, ಹೋರಾಡಿ, ‘ದಿಲ್ ವಾಲೆ ದುಲ್ಹನಿಯಾ...’ ಸಿನಿಮಾದ ರೀತಿಯಲ್ಲಿ  ಹಠಕ್ಕೆ ಬಿದ್ದು, ಕೊನೆಗೂ ತಮ್ಮ ಮಾವನ ಮನಸ್ಸು ಗೆದ್ದು ನಮ್ಮ ಅಜ್ಜಿಯನ್ನು ಮದುವೆ ಆದ್ರು; …ಅದಕ್ಕೆ ನಾನು !“ ;  ಎಂದು ಹೆಮ್ಮೆಯಿಂದ ಬೀಗುತ್ತ ತನ್ನ ಬಿಳಿಯ ಮೈಬಣ್ಣ ಬಳುವಳಿ ಬಂದ ಪರಿಯನ್ನು ಹೆಮ್ಮೆಯಿಂದ  ಹೇಳಿಕೊಳ್ಳುವಳು.  ಪಾರ್ವತಿಗೋ ಅದು ಸಂಕಟ; “ನೀನು ಥೇಟ್ ನಿಮ್ಮ ಅಪ್ಪನ ಥರಾನೆ ಕಣೆ! “ ಎಂದು ಹೇಳಿದರೆ, ಅವಳು  “ನಮ್ಮ ಅಮ್ಮನೂ ಎಷ್ಟು ಬೆಳ್ಳಗಿದ್ದಾಳೆ ಗೊತ್ತ, ಈ ಕಪ್ಪಗಿರೊ ಅಪ್ಪನನ್ನು ಹೇಗೆ ಒಪ್ಪಿದಳೋ ಕಾಣೆ; ನಾನಾಗಿದ್ದರೆ ಒಪ್ಪುತ್ತಿರಲಿಲ್ಲ..”  ಎಂದು ತನ್ನ ಶ್ಯಾಮಲ ಮೈಬಣ್ಣವನ್ನು ಶಪಿಸುವಳು.
 


ಹೀಗೆಲ್ಲ ಏಕೆ? ಸೌಂದರ್ಯವೆಲ್ಲ ಈ ಬಿಳಿಯ ಮೈಬಣ್ಣದೊಳಗೆ ಅಡಗಿ ಕುಳಿತ ಪರಿ ಹೇಗೆಂದು ಯೋಚಿಸುತ್ತ ಕುಳಿತೆ. ಅಂದು 1994 ಇಸವಿಯ ನವೆಂಬರ್, 19 ತಾರೀಖಿನ ದಿನ; ಭುವನ ಸುಂದರಿ ಸ್ಪರ್ಧೆಯ ಅಂತಿಮ ಕ್ಷಣಗಳು ಟೀವಿಯಲ್ಲಿ ಬಿತ್ತರವಾಗುತ್ತಿದ್ದವು; ದಕ್ಷಿಣ ಆಫ್ರಿಕಾದ ಶ್ಯಾಮ ಸುಂದರಿ ಮತ್ತು ವೆನಿಜುವೆಲಾದ ನೀಳ ಸುಂದರಿಯ ಜೊತೆಗೆ ನಮ್ಮ ದೇಶದ  ಸುಂದರಿಯೊಬ್ಬಳು ಅಂತಿಮ ಸುತ್ತಿನಲ್ಲಿದ್ದ ಮೂವರು ಸ್ಪರ್ಧಿಗಳು. ಈ ಮೂವರಲ್ಲಿ ಒಬ್ಬರು ಮುಂದಿನ ಕ್ಷಣಗಳಲ್ಲಿ ವಿಶ್ವ ಸುಂದರಿಯರಾಗುವವರಿದ್ದರು. ಯೂರೋಪಿಯನ್ನರೇ ಆಗಿರುವ ಆಯೋಜಕರ ಸೌಂದರ್ಯ ಪ್ರಜ್ಞೆಯ ಪರಿಧಿಯೊಳಗೆ ಭಾರತೀಯ ನಾರಿಯರು ಬಂದಿರುವುದು ಖುಷಿಯಾಗಿತ್ತು. ಹಿಂದಿನ ವರ್ಷ ಜಮೈಕಾದ ಒಬ್ಬ ಶ್ಯಾಮಲ ವರ್ಣದ ಸುಂದರಿಯು ವಿಶ್ವ ಸುಂದರಿಯಾಗಿದ್ದರಿಂದ ಈ ವರ್ಷ ಆಯೋಜಕರ ಕೃಪೆ ಭಾರತೀಯ ಸ್ಪರ್ಧಿಯಮೇಲೆ ಹೊರಳಬಹುದೆಂಬ ಆಶಾಭಾವನೆಯೊಂದಿಗೆ ಮತ್ತು ಕೊಂಚ ಲೆಕ್ಕಚಾರದೊಂದಿಗೆ ಕುಳಿತೆ. ಆಗತಾನೆ ಭಾರತದಲ್ಲಿ ನರಸಿಂಹರಾಯರ ಸರಕಾರ ಮನಮೋಹನ ಸಿಂಘರ ಸಲಹೆಯಂತೆ ಆರ್ಥಿಕ ಉದಾರೀಕರಣದ ನೀತಿಯಡಿ ಭೌಗೋಳಿಕರಣದತ್ತ ಹೆಜ್ಜೆ ಇಟ್ಟಿತ್ತು. ಹಲವು ಬಿಲಿಯನ್ ಡಾಲರ್ ಗಳ ಸೌಂದರ್ಯ ಸಾಧನಗಳ, ಸೌಂದರ್ಯ ವರ್ಧಕಗಳ ಭಾರತೀಯ ಮಾರುಕಟ್ಟೆ ವಿಶ್ವದ ಕಣ್ಣಿಗೆ ಬಿದ್ದಿತ್ತು. ಹೀಗಿರುವಾಗ ಭಾರತೀಯ ನಾರಿಯು ಗೆಲ್ಲದೆ, ತನ್ಮೂಲಕ ಎಲ್ಲ ಭಾರತೀಯ ನಾರಿಯರು ಹೆಮ್ಮೆಯಿಂದ ಬೀಗದೆ ಇಲ್ಲಿನ ಬೃಹತ್ ಮಾರುಕಟ್ಟೆಯು ತೆರೆದು ಕೊಳ್ಳುವಂತಿರಲಿಲ್ಲ; ನನ್ನ ಲೆಕ್ಕಾಚಾರದಲ್ಲಿ ಈ ಬಾರಿ ಭಾರತೀಯ ಸುಂದರಿ ಗೆಲ್ಲಲೇಬೇಕಾಗಿತ್ತು. ಎಂದಿನಂತೆ ಕೊನೆಯ ಪ್ರಶ್ನಾವಳಿ ಸುತ್ತಿಗಾಗಿ ಎಲ್ಲರೂ ಕಾಯುತ್ತಿದ್ದರು.  ಇಷ್ಟು ಸಲೀಸಾಗಿ ಒಂದು ಪ್ರಶ್ನೆಯ ಉತ್ತರವು ಒಂದು ಕಿರೀಟವನ್ನು ಗೆಲ್ಲುವ ಈ ವಿಲಕ್ಷಣ ಪದ್ದತಿಯು ನನಗೆ ರೋಚಕವಾಗಿ ಕಾಣುತ್ತಿತ್ತು!  ಅಂತೂ ನಮ್ಮ ಭಾರತೀಯ ಸುಂದರಿ ಗೆದ್ದಳು. ಭಾರತೀಯ ಸೌಂದರ್ಯ ಸಾಧನಗಳ, ಸೌಂದರ್ಯ ವರ್ಧಕಗಳ ಮಾರುಕಟ್ಟೆಗೆ ಜಾಗತಿಕ ಮೆರುಗು ಬರತೊಡಗಿತು. ಬೆಳ್ಳಗಿರುವುದೇ ಸೌಂದರ್ಯ, ಬೆಳ್ಳಗಾಗುವುದೇ ಸೌಂದರ್ಯದ ಸಿದ್ಧಿಗೆ ಇರುವ ಏಕೈಕ ಹಾದಿ ಎಂದು ಉತ್ಪಾದಕರು ಎಲ್ಲ ಮಾಧ್ಯಮಗಳಲ್ಲಿ ಈಗಾಗಲೇ ಮನೆ ಮಾಡಿದ್ದ ನಂಬಿಕೆಗೆ ನೀರೆರೆಯುವಂತೆ ಬೊಬ್ಬೆಹೊಡೆಯಲಾರಂಭಿಸಿದರು. ಮಾರುಕಟ್ಟೆ ವೃದ್ಧಿಸತೊಡಗಿತು; ಅಲ್ಲಿಂದ ಸಾಲಾಗಿ ನಮ್ಮ ಹುಡುಗಿಯರೇ ಹಲವು ಇಂಥ ಸ್ಪರ್ಧೆಗಳನ್ನು ಗೆಲ್ಲತೊಡಗಿದರು! 

ಒಂದು ಪ್ರಬಲವಾದ ಆರ್ಥಿಕ ಹಿತಾಸಕ್ತಿ ಮತ್ತು ಪ್ರಭಾವಿ ರಾಜಕೀಯ ಅಧಿಕಾರವು  ನಮ್ಮೊಳಗಿನ ಸೌಂದರ್ಯದ ಭಾಷೆ, ಪ್ರಜ್ಞೆ, ಪರಿಕಲ್ಪನೆ, ಗ್ರಹಿಕೆ, ಆಸ್ವಾದನೆಯ ತಳಹದಿಯನ್ನೇ ಬದಲಿಸಬಲ್ಲದು ಎಂದು ನಾನು ಹೇಳಿದರೆ ನೀವ್ಯಾರು ಸುಲಭವಾಗಿ ಒಪ್ಪಲಾರಿರಿ. ಅದನ್ನು ಎಲ್ಲರ ತರ್ಕಕ್ಕೆ ನಿಲುಕುವ ರೀತಿಯಲ್ಲಿ ಹೇಳದೆ ಹೋದರೆ ಒಪ್ಪಲು ಸಾಧ್ಯವೇ ಇಲ್ಲ. ಅಸಲಿಗೆ, ನಮಗೆ ಗೊತ್ತಿರುವ ಪರಮ ಸುಂದರಿಯೊಬ್ಬಳನ್ನು ಸುಂದರಿಯಲ್ಲ ಎಂದು ಭ್ರಮಿಸುವುದು ಹೇಗೆ ಎಂಬ ಮೂಲಭೂತ ಸಮಸ್ಯೆ ಏಳುತ್ತದೆ.  ಇದನ್ನು ಹೀಗೆ ಪರಿಹರಿಸೋಣ. ಎಪ್ಪತ್ತರ ದಶಕದಲ್ಲಿ ಚಾಲ್ತಿಯಲ್ಲಿದ್ದ, ಬೀದಿಯ ಧೂಳನ್ನು ಸುಯ್ಯೆಂದು ಎಬ್ಬಿಸುತ್ತಿದ್ದ, ತಳಕ್ಕೆ ಹಿತ್ತಾಳೆ ಹಲ್ಲಿನ ಜಿಪ್ ಅನ್ನು ಹೊಲೆದು ಕೊಂಡಿದ್ದ 26 ಇಂಚಿನ ಬೆಲ್ ಬಾಟಮ್ ಪ್ಯಾಂಟನ್ನು ಇಂದು ಯಾರಾದರು ಹಳೆಯ ಪೆಟ್ಟಿಗೆಯ ಗೋರಿಯಿಂದ ಎಬ್ಬಿಸಿ ಧರಿಸಿ ಹೊರಟರೆ, ದಾರಿಹೋಕರು, ”ಹೀಗೆಲ್ಲ ವಿರೂಪವಾಗಿ ಓಡಾಡಬಹುದೆ, ಸಭ್ಯತೆ ಇಲ್ಲದ ಜನ”, ಎಂದು ಮೂಗು ಮುರಿಯಬಹುದು.
ಅಚ್ಚರಿಯೆಂದರೆ, ಒಂದು ಕಾಲದಲ್ಲಿ ಸ್ಪರ್ಧೋಪಾದಿಯಲ್ಲಿ ಹೆಚ್ಚು-ಹೆಚ್ಚು ಅಗಲದ ಹೆಂಗಸರ ಲಂಗದಂತಿದ್ದ ಪ್ಯಾಂಟುಗಳನ್ನು ಹೊಲಿಸಿಕೊಂಡು ಸುರ-ಸುಂದರಾಂಗರಂತೆ ಬೀಗುತ್ತಿದ್ದ ಗಂಡಸರ ಈ ಬೆಲ್ ಬಾಟಮ್ ಪ್ಯಾಂಟ್ ಗೆ ಇವತ್ತಿನ ಕುರೂಪ ಸುತ್ತಿಕೊಂಡದ್ದು ಹೇಗೆ? ತಾರ್ಕಿಕವಾಗಿ, ಅಂದು ಸುಂದರವಾಗಿದ್ದು ಎಂದೆಂದಿಗೂ ಸುಂದರವಾಗಿರಬೇಕಲ್ಲವೆ?  ನಮಗೆ ಇಂದು ಅದು ಕುರೂಪವಾಗಿ ಕಾಣುವುದೇಕೆ? ಅಂದು, ಅಷ್ಟೊಂದು ಮೋಹಕವಾಗಿ, ಸುಂದರವಾಗಿದ್ದು ಇಂದು ನಮಗೆ ವಿರೂಪವಾಗಿ ಕಾಣುವುದು ಹೇಗೆ?  ಈಗ್ಗೆ ಸುಮಾರು ಏಳುನೂರು-ಎಂಟುನೂರು ವರ್ಷಗಳಾಚೆ ನಮ್ಮ-ನಮ್ಮ ಮೈಬಣ್ಣಗಳೇ ಸುಂದರವೆಂದು ಭಾವಿಸುತ್ತಿದ್ದ ನಮ್ಮೊಳಗೆ, ನಮ್ಮಲ್ಲಿಲ್ಲದ ಬಿಳಿಯ ಮೈಬಣ್ಣವು  ಸುಂದರವೆಂದು ನಮ್ಮ ಆಂತರ್ಯವನ್ನು ಹೊಕ್ಕಿದ್ದು ಹೇಗೆ?  ಎಂಬ ಜಿಜ್ಞಾಸೆಯ ಎಳೆಯನ್ನು ಹಿಡಿದು ಹೊರಟರೆ ರೋಚಕವಾದ ಇನ್ನೊಂದು ಲೋಕವೇ ನಮ್ಮ ಮುಂದೆ ಅನಾವರಣಗೊಳ್ಳುತ್ತದೆ.

ಇದು ನಮ್ಮೊಳಗಿನ ಮೌಲ್ಯ ಧಾರಣ ಶಕ್ತಿಯ ಕುಚೋದ್ಯವೇ ಆಗಿದೆ! ಮಾನವ ತನ್ನೊಳಗೆ ನಾಗರೀಕತೆಯ ಬೀಜವು ಬಿತ್ತನೆಯಾಗುವ ಮೊದಲೇ ಸೃಷ್ಠಿಯಲ್ಲಿ ತನಗೆ ಯಾವುದು ಬಲಿಷ್ಠ, ಅಗಾಧ, ಶಕ್ತಿಶಾಲಿ ಎಂದು ತೋರುವುದೋ ಅವೆಲ್ಲವನ್ನು ತನ್ನೊಳಗೆ ಆವಾಹಿಸಿ, ತಾನೇ ಅದಾಗುವ, ಆ ಗುಣಗಳನ್ನು ತನ್ನೊಳಗೆ ರೂಢಿಸಿಕೊಳ್ಳುವ, ದಕ್ಕದಿದ್ದರೆ ಅವುಗಳನ್ನು ಆರಾಧಿಸುವ ಮನಸ್ಥಿತಿ ಹೊಂದಿದ್ದನ್ನು ತಿಳಿದಿದ್ದೇವೆ.  ಹೀಗಾಗಿ, ಅವನು ಚೈತನ್ಯದ ಅದಮ್ಯ ಆಕರವಾದ ಸೂರ್ಯನನ್ನು ಆರಾಧಿಸತೊಡಗುತ್ತಾನೆ; ವಾಯು, ಸಮುದ್ರ, ಮಳೆ, ಸೂರ್ಯ-ಚಂದ್ರ ಗ್ರಹಣಗಳ ಸ್ವರೂಪವನ್ನು ಅರಿಯಲಾಗದೆ ಅವುಗಳನ್ನೂ ಆರಾಧಿಸುತ್ತಾನೆ. ಮುಂದೆ ನಾಗರೀಕತೆಯ ಚಿಗುರು ಮೊಳೆತು ನಾಗರೀಕ ಜಗತ್ತಿಗೆ ಕಾಲಿಟ್ಟಮೇಲೆಯೂ ಈ ಗುಣ ಅವನನ್ನು ಬಿಡದೆ ಸಂಪೂರ್ಣ ಆವರಿಸಿದೆ. ಇಂದಿಗೂ ಶ್ರೇಷ್ಠತೆ, ಪ್ರಭಾವ, ಐಶ್ವರ್ಯ, ಅಧಿಕಾರ ಇವೆಲ್ಲವೂ ಸಾಮಾನ್ಯವಾಗಿ ಎಲ್ಲರನ್ನು ಆವರಿಸಿಬಿಡುತ್ತವೆ; ಅವೆಲ್ಲವನ್ನು ಗಳಿಸುವ, ಆವಾಹಿಸುವ ಜಾಲಕ್ಕೆ ಬಿದ್ದು, ಅವುಗಳ ಗುಣಲಕ್ಷಣಗಳೆಲ್ಲವೂ ನಮಗೆ ಅಪ್ರತಿಮ, ಅಸದೃಶ ಮತ್ತು ಶ್ರೇಷ್ಠವಾಗಿ ತೋರುವುವು. ಇಂಥಹ ಪ್ರಭಾವಿ ಸ್ಥಾನವನ್ನು ಬ್ರಿಟೀಷರು ತಮ್ಮ ವಸಾಹತು ಆಳ್ವಿಕೆಯಲ್ಲಿ, ಭಾರತವನ್ನೂ ಒಳಗೊಂಡು ಜಗತ್ತಿನ ಹೆಚ್ಚು ಭೂಭಾಗವನ್ನು ಅಲಂಕರಿಸುತ್ತಾರೆ.  ಕಾಲ ಕ್ರಮೇಣ ಬ್ರಿಟೀಷರ ಗುಣ ಲಕ್ಷಣಗಳೆಲ್ಲವೂ ಶ್ರೇಷ್ಠವೆಂಬಂತೆ ಎಲ್ಲರಲ್ಲಿ ಮನೆ ಮಾಡುತ್ತವೆ. ಇಂದಿಗೂ ಎಲ್ಲೆಡೆ, ಇಂಗ್ಲಿಷ್ ತಿಳಿದಿರುವುದು, ಮಾತನಾಡುವುದು, ಬಿಳಿಯ ಮೈಬಣ್ಣ, ಪಾಶ್ಚಿಮಾತ್ಯ ಸಂಸ್ಕೃತಿ, ಅವರ ಉಡುಗೆ ತೊಡುಗೆ ಎಲ್ಲವೂ ಹೆಮ್ಮೆಯ, ಪ್ರತಿಷ್ಠೆಯ ಪ್ರತೀಕವೇ ಆಗಿದೆ. ಇಂಗ್ಲಿಷ್ ಸಹ ತಮಿಳು ತೆಲುಗಿನಂತೆ ಕೇವಲ ಒಂದು ಭಾಷೆಯೆಂಬ ಅರಿವು ಮೂಡದೆ ಹೋಗಿದೆ; ನಮ್ಮ ತಲೆ ಕೂದಲು ಕಪ್ಪಿದ್ದರೆ ಸುಂದರವೆಂದು ಭ್ರಮಿಸುವ ನಾವು, ನಮ್ಮ ಮೈ ಬಣ್ಣ ಮಾತ್ರ ಬೆಳ್ಳಗಿರಬೇಕೆಂದು ನಿರೀಕ್ಷಿಸುತ್ತೇವೆ. ಮದುವೆಯಾಗುವ ಹುಡುಗ ಕಪ್ಪಗಿದ್ದರೂ ಹುಡುಗಿ ಬೆಳ್ಳಗಿರಬೇಕೆಂದು ಆಗ್ರಹಿಸುತ್ತಾನೆ. ಪಾಶ್ಚಿಮಾತ್ಯ ಉಡುಪುಗಳೇ ನಾಗರೀಕತೆಯ ಪ್ರತೀಕವೆಂದು ತಿಳಿಯುತ್ತೇವೆ. ಇವುಗಳ ಸಿಕ್ಕಿನಿಂದ, ಇಂದಿಗೂ ನಾವು ಹೊರಬರಲು ಆಗಿಲ್ಲ; ಹೊರ ಬರುವುದಿರಲಿ, ದಿನ ದಿನಕ್ಕೂ ಆ ಸಿಕ್ಕು ಇನ್ನು ಜಟಿಲವಾಗುತ್ತಾ, ನಮ್ಮ ಸಾಮಾಜಿಕ, ಆರ್ಥಿಕ, ತನ್ಮೂಲಕ ಶೈಕ್ಷಣಿಕ ಸ್ತರಗಳನ್ನು ಗಾಢವಾಗಿ ಆವರಿಸಿ ಹೊರಗೆ ಬರಲಾರವೇನೋ ಎಂಬ ಆತಂಕ ಸೃಷ್ಠಿಸಿ ಅಗೋಚರವಾಗಿ ನಮ್ಮನ್ನು, ನಮ್ಮ ಭಾಷೆಯನ್ನು, ನಮ್ಮ ಮೈಬಣ್ಣವನ್ನು, ನಮ್ಮ ಆಚಾರ-ವಿಚಾರಗಳನ್ನು ಅಪಮೌಲ್ಯಗೊಳಿಸಿದೆ. ಕನ್ನಡ ಮಾತನಾಡುವುದು, ಕಪ್ಪು ಮೈಬಣ್ಣ ಹೊಂದಿರುವುದು, ದೇಸೀ ಸಂಸ್ಕೃತಿ, ಆಚಾರಗಳು ನಮ್ಮ ಕಣ್ಣುಗಳಲ್ಲೇ ಕೀಳಾಗಿ ಹೋಗಿವೆ.  

ಇಂಥಹ ಆತ್ಮಹತ್ಯಾಕಾರಕ ಮೌಲ್ಯಗಳನ್ನು ನಮ್ಮ ಮನದ ಪರದೆಯ ಹಿಂದೆ ನಮಗರಿವಿಲ್ಲದಂತೆ ನಾವು ಬಿತ್ತಿ ಬೆಳೆದು ಈ ಮನಸ್ಥಿತಿಯಿಂದ ನಮ್ಮವರನ್ನೇ ಒಂದು ಶತಮಾನ ಶೋಷಿಸಿದ ನಿರ್ದಯಿ ಜನಗಳು ನಾವು. ಹೇಗೋ, ಹಂಗೂ-ಹಿಂಗೂ ಬೆಳ್ಳಗಾದ ನಮ್ಮಲ್ಲಿನ ಕೆಲವು ಜನ, ಮೂಲನಿವಾಸಿಗಳಾದ ಕಪ್ಪು ಜನರನ್ನು ಇಂದಿಗೂ ಕೀಳಾಗಿ ಕಾಣುವುದನ್ನು ನೋಡುತ್ತೇವೆ. ಇಂಗ್ಲಿಷ್ ಬಾರದವರನ್ನು ಅನಾಗರೀಕರಂತೆ ಭಾವಿಸುವುದು; ಇಂಗ್ಲಿಷ್ ಬಾರದವರಿಗೆ ಕಾರ್ಪೊರೇಟ್ ಜಗತ್ತಿನಲ್ಲಿ ನೌಕರಿ ಸಿಗದಿರುವುದು, ಇವೆಲ್ಲ ನಮಗೆ ನಾವು ಮಾಡಿಕೊಳ್ಳುತ್ತಿರುವ ಹಾಡು-ಹಗಲಿನ ಅತ್ಯಾಚಾರವೆಂದರೂ ಕಡಿಮೆಯೆ. ಈ ಕೀಳರಿಮೆಯಿಂದ ಕಪ್ಪು ಜನರು ಸಹ ತಾವೂ ಬೆಳ್ಳಗಾಗುವ ಹಪಾಹಪಿಗೆ ಬಿದ್ದಿದ್ದಾರೆ. ಇಂಗ್ಲಿಷ್ ಬಾರದವರು ಗೊತ್ತಿರುವ ಅಲ್ಪ ಕನ್ನಡವನ್ನೂ ಮರೆತು ಅತ್ತ ಇಂಗ್ಲೀಷೂ ಸರಿಯಾಗಿ ಕಲಿಯಲಾಗದೆ ಇತ್ತ ಕನ್ನಡವೂ ಸರಿಯಾಗಿ ಬರದೆ ಎಡಬಿಡಂಗಿಗಳಾಗುತ್ತಿದ್ದಾರೆ.   

ರಾಮ ಮನೋಹರ ಲೋಹಿಯಾ ಇದನ್ನು ಸೊಗಸಾಗಿ ವಿಷ್ಲೇಶಿಸಿದ್ದಾರೆ. This distortion of aesthetic judgement must be ascribed to political influences. The fair-skinned peoples of Europe have dominated the world for over three centuries. For the most part, they conquered and ruled, but in any event, they have possessed power and prosperity, which the coloured peoples have not. If the Negroes of Africa had ruled the world, the world in the manner of whites of Europe, standards of woman’s beauty would undoubtedly have been different. Poets and essayists would have spoken of the soft satin of the Negro skin and its ennobling feel and sight; their aesthetic constructions of the beautiful lip or elegant nose would have tended to be on the side of fullness. Politics influence aesthetics; power also looks beautiful, particularly unequalled power.
‘‘ಈ ವ್ಯಾಕೃತ ಸೌಂದರ್ಯ ನಿರ್ಣಯಕ್ಕೆ ಪ್ರಭಾವಿ ರಾಜಕಾರಣದ ಚೋದನೆಗಳೇ ಕಾರಣವೆನ್ನಬೇಕು. ಬಿಳಿಯ ಮೈಬಣ್ಣದ ಯೂರೋಪಿನ ಜನ  ಮೂರು ಶತಮಾನಗಳಿಗೂ ಮೀರಿ ಈ ಜಗತ್ತಿನ ಮೇಲೆ ತಮ್ಮ ಪ್ರಾಬಲ್ಯವನ್ನು ಮೆರೆದಿದ್ದಾರೆ. ಈ ಜಗತ್ತಿನ ವ್ಯಾಪಕ ಭೂಭಾಗವನ್ನು ವಶಪಡಿಸಿಕೊಂಡು ಆಳಿದ ಅವರು, ಎಲ್ಲೆಡೆ ವರ್ಣೀಯರಿಗೆ ದಕ್ಕದ ಅಧಿಕಾರ ಮತ್ತು ಅಭ್ಯುದಯವನ್ನು  ತಮ್ಮದಾಗಿಸಿಕೊಂಡಿದ್ದಾರೆ.  ಒಂದು ಪಕ್ಷ, ಆಫ್ರಿಕದ ನೀಗ್ರೋಗಳು, ಈ ಬಿಳಿಯ ಯೂರೋಪಿಯನ್ನರಂತೆ ವ್ಯಾಪಕವಾಗಿ ಈ ಜಗತ್ತನ್ನು ಆಳಿದ್ದರೆ,  ಹೆಣ್ಣಿನ ಸೌಂದರ್ಯವನ್ನು ಅಳೆಯುವ ಮಾನದಂಡಗಳು ನಿಸ್ಸಂದೇಹವಾಗಿ ಬೇರೆಯಾಗಿರುತ್ತಿದ್ದವು. ಅಗ ಕವಿಗಳು, ಲೇಖಕರು, ನೀಗ್ರೊ ಮೈನ ಮಾರ್ದವ ರೇಶಿಮೆಯ ನುಣುಪನ್ನು, ಉದಾತ್ತವೆನಿಸುವ ಅದರ ಸ್ಪರ್ಷವನ್ನು ಮತ್ತು  ಕಣ್ತುಂಬುವ ಅದರ ಸೊಬಗನ್ನು ಹಾಡಿ-ಹೊಗಳುತ್ತಿದ್ದರು; ಮೋಹಕ ತುಟಿ, ಲಾವಣ್ಯಭರಿತ ಮೂಗುಗಳ ಅವರ ರಸಕಲ್ಪನೆಯು ನೀಗ್ರೊಗಳ ತುಂಬಿದ ತುಟಿ, ಮೂಗುಗಳ ಕಡೆಗೆ ಹೊರಳುತ್ತಿತ್ತು. ಹೀಗೆ ರಾಜಕಾರಣವು ರಸಕಲ್ಪನೆಯ ವ್ಯಾಖ್ಯಾನವನ್ನೂ, ಸೌಂದರ್ಯ ಪ್ರಜ್ಞೆಯನ್ನೂ ರೂಪಿಸಬಲ್ಲದು. ಅಂದಹಾಗೆ, ಅಧಿಕಾರವೂ ಸಹ ಸುಂದರವಾಗಿ, ಮೋಹಕವಾಗಿ ಕಾಣುವುದು ; ಅದರಲ್ಲೂ ಎಣೆಯಿಲ್ಲದ ಅಧಿಕಾರವಂತೂ ಇನ್ನೂ ಸುಂದರ, ಇನ್ನೂ ಮೋಹಕ’’.

ಇದರಿಂದ ಸಾಬೀತಾಗುವುದೇನೆಂದರೆ ನಮಗೆ ಕಾಣುವ, ಭಾಸವಾಗುವ, ನಮ್ಮ ಅನುಭವಕ್ಕೆ ಬರುವ ವಸ್ತುವೊಂದರ ಸೌಂದರ್ಯವು ಆ ವಸ್ತುವಿನಲ್ಲಿರುವುದಿಲ್ಲ; ಬದಲಿಗೆ  ನಮ್ಮ ಆಂತರ್ಯದಲ್ಲಿರುತ್ತದೆ, ಕಲ್ಪನೆಯಲ್ಲಿರುತ್ತದೆ. ಆದುದರಿಂದ ತಿಳಿದವರು Beauty lies in the eyes of the beholder ಎಂದು ಹೇಳುವುದು. ಸೌಂದರ್ಯವು ನೋಡುವವನ ಕಣ್ಣಿನಲ್ಲಿರುವುದು, ವಸ್ತುವಿನಲ್ಲಲ್ಲ.  ಸೌಂದರ್ಯದ ಪರಿಕಲ್ಪನೆಯನ್ನು ಆ ವಸ್ತುವಿನೊಂದಿಗೆ ನಮ್ಮ ಅರಿವಿಗೆಬಾರದಂತೆ ಹೊಂದಿಸಿರುತ್ತೇವೆ; ಹಾಗಾಗಿ ಅದು ಸುಂದರವೆಂಬಂತೆ ಭಾಸವಾಗುವುದು. ಹೀಗೆ ಸಮೂಹವಾಗಿ ಆರೋಪಿಸಲಾದ ಈ ಗುಣಗಳಿಂದ ಹೆಚ್ಚು ಕಡಿಮೆ ಎಲ್ಲರಿಗೂ ವಸ್ತುಗಳು ಸುಂದರವಾಗಿಯೂ, ಕುರೂಪವಾಗಿಯೂ ಕಾಣುತ್ತವೆ. ಅಭಿಪ್ರಾಯ ಬದಲಾದಂತೆ ಹೀಗೆ ಆರೋಪಿಸಲಾದ ಗುಣಗಳೂ ಬದಲಾಗುತ್ತವೆ. ಕೆಲ ವಸ್ತುಗಳ ಮೇಲಿನ ಅಭಿಪ್ರಾಯಗಳು ಹೆಚ್ಚು ಕಾಲ ಉಳಿದಂತೆ ಆ ವಸ್ತುಗಳು ಅವುಗಳ ಮೇಲೆ ಆರೋಪಿಸಲಾದ ಗುಣಗಳನ್ನು ಆಧರಿಸಿ ಅವು ಅಷ್ಟು ಕಾಲ ಸುಂದರವಾಗಿಯೋ, ಕುರೂಪವಾಗಿಯೋ ಕಾಣುತ್ತವೆ.

ಒಂದು ಪ್ರಬಲವಾದ ಆರ್ಥಿಕ ಹಿತಾಸಕ್ತಿ ಮತ್ತು ಪ್ರಭಾವಿ ರಾಜಕೀಯ ಅಧಿಕಾರವು  ನಮ್ಮೊಳಗಿನ ಸೌಂದರ್ಯದ ಭಾಷೆ, ಪ್ರಜ್ಞೆ, ಪರಿಕಲ್ಪಪನೆ, ಗ್ರಹಿಕೆ, ಆಸ್ವಾದನೆಯ ತಳಹದಿಯನ್ನೇ ಬದಲಿಸಬಲ್ಲದು. ಇನ್ನಾದರೂ ಈ ಭ್ರಮೆಯಿಂದ ಹೊರಬರೋಣವೆ?