ಹೋಮರನ ಮಹಾಕಾವ್ಯ ಇಲಿಯಾಡ್ ನಲ್ಲಿ ಟ್ರೋಜನ್ ಯುದ್ಧದ ಸನ್ನಿವೇಶವನ್ನು
ಓದುತ್ತಾ ಹೋದಂತೆ ಅಲ್ಲಿ ಬರುವ ಪಾತ್ರಗಳು ಓದುಗರನ್ನು ಒಂದು ಮಹಾ ಸಿಕ್ಕಿನೊಳಕ್ಕೆ
ದೂಡುವುದು ಖಚಿತ. ಯಾರು, ಯಾರ ಮಕ್ಕಳು; ಯಾವ ದೇವತೆ ಯಾರ ಪರ, ಯಾರ ವಿರುದ್ಧ ಎಂಬ
ಆಂಶಗಳು ಸ್ಪಷ್ಟವಾಗಿ ತಿಳಿಯ ಬೇಕಾದರೆ ಟ್ರಾಯ್ ನಗರದ ಹುಟ್ಟಿನಿಂದ ಕಥೆಯನ್ನು ಪ್ರಾರಂಭಿಸಬೇಕು.
ದೇವತೆಗಳ ರಾಜನಾದ ಜ್ಯೂಸ್ ನ ಸಂತತಿಯಾದ ಲೆಯೊಮೆಡಾನ್ ಎಂಬ ರಾಜ ಟ್ರಾಯ್
ನಗರದ ಕೋಟೆಯನ್ನು ಕಟ್ಟಿಸಲು ಮುಂದಾಗುತ್ತಾನೆ. ಇದೇ ಸಮಯದಲ್ಲಿ ದೇವಲೋಕದ ರಾಜನಾದ
ಜ್ಯೂಸನು ಪೊಸೈಡನ್ ಮತ್ತು ಅಪೊಲೊ ಎಂಬ ದೇವತೆಗಳನ್ನು ಅವಿಧೇಯರಾಗಿ ನಡೆದುಕೊಂಡರು ಎಂಬ
ಕಾರಣಕ್ಕಾಗಿ ದೇವಲೋಕ ಮೌಂಟ್ ಒಲಿಂಪಸ್ ನಿಂದ ಹೊರಹಾಕಿ ಟ್ರಾಯ್ ನಗರದ ಕೋಟೆಯನ್ನು
ಕಟ್ಟಲು ಲೆಯೊಮೆಡಾನ್ ಗೆ ಸಹಾಯ ಮಾಡುವಂತೆ ಕಳುಹಿಸುತ್ತಾನೆ. ಆದರೆ ವಿಧಿಯ ಲಿಖಿತದಂತೆ
ಮುಂದೊಂದು ದಿನ ಈ ಟ್ರಾಯ್ ದೇಶವು ಈ ಮಾನವ ನಿರ್ಮಿತ ಕೋಟೆಯಲ್ಲಿ ವೈರಿಗಳ ವಶವಾಗುವುದು
ಎಂದು ಇದ್ದುದರಿಂದ, ಇವರಿಬ್ಬರು ಜ್ಯೂಸನ ಮಗನೊಬ್ಬನಾದ ಈಕಸ್ ಎಂಬ ಮಾನವನನ್ನು ಈ ಕೋಟೆಯ
ನಿರ್ಮಾಣಕ್ಕೆ ಕರೆಯುತ್ತಾರೆ. ಕೋಟೆಯ ನಿರ್ಮಾಣವು ಮುಗಿದ ನಂತರ ಪೊಸೈಡನ್ ಮತ್ತು ಅಪೊಲೊ
ತಮ್ಮ ಶ್ರಮಕ್ಕೆ ಪ್ರತಿಫಲವನ್ನು ಕೊಡುವಂತೆ ಲೆಯೊಮೆಡಾನ್ ನನ್ನು ಕೇಳುತ್ತಾರೆ. ಅವರ
ಬೇಡಿಕೆಯನ್ನು ಲೆಯೊಮೆಡಾನ್ ತಿರಸ್ಕರಿಸಿ ಅವರನ್ನು ಹೀನವಾದ ಮಾತುಗಳಿಂದ ನಿಂದಿಸಿ
ಓಡಿಸುತ್ತಾನೆ. ಇದರಿಂದ ಕೋಪಗೊಂಡ ಆ ದೇವತೆಗಳು ಟ್ರಾಯ್ ನಗರದ ಮೇಲೆ ಪ್ರತಿಕಾರಕ್ಕೆ
ಮುಂದಾಗುತ್ತಾರೆ. ಅಪೊಲೊ ಆ ನಗರಕ್ಕೆ ದೊಡ್ಡರೋಗ ಪ್ಲೇಗ್ ಬರುವಂತೆ ಮಾಡುತ್ತಾನೆ;
ಸಮುದ್ರ ದೇವತೆಯಾದ ಪೊಸೈಡನ್ ಸಮುದ್ರದಿಂದ ಸಮುದ್ರ ರಾಕ್ಷಸ (ಸೀ ಮಾನ್ಸ್ಟರ್) ವನ್ನು
ಟ್ರಾಯ್ ನಗರದ ಮೇಲೆ ಬಿಡುತ್ತಾನೆ. ಇವುಗಳಿಂದ ಭೀತನಾದ ಲೆಯೊಮೆಡಾನ್ ತನ್ನ ನಗರವನ್ನು
ರಕ್ಷಿಸಿಕೊಳ್ಳುವುದು ಹೇಗೆ ಎಂದು ದೇವರ ಆವಾಹನೆಯಲ್ಲಿ (ಆರಕಲ್) ಕೇಳುತ್ತಾನೆ. ತನ್ನ
ಮಗಳಾದ ಹೀಸಿಯೋನಳನ್ನು ಬಲಿ ಕೊಟ್ಟರೆ ಈ ಪಿಡುಗು ತೊಲಗುವುದು ಎಂದು ದೇವರ ಆವಾನೆಯಲ್ಲಿ
ಲೆಯೊಮೆಡಾನ್ ಗೆ ತಿಳಿಯುತ್ತದೆ. ಲೆಯೊಮೆಡಾನ್ ತಡಮಾಡದೆ ಸಮುದ್ರ ರಾಕ್ಷಸನಿಗೆ ಸಿಗುವಂತೆ
ಹೀಸಿಯೋನಳನ್ನು ಸಮುದ್ರ ತೀರದ ಬಂಡೆಯೊಂದಕ್ಕೆ ಸರಪಳಿಯಿಂದ ಕಟ್ಟಿಹಾಕುತ್ತಾನೆ. ಆಗ
ಅಲ್ಲೇ ಇದ್ದ ಹಿರಾಕಲ್ಸ್ ಎಂಬ ದೇವರಾಜ ಜ್ಯೂಸ್ ನ ಮತ್ತೊಬ್ಬ ಪುತ್ರನು ಹೀಸಿಯೋನಳನ್ನು
ರಕ್ಷಿಸುವುದಾಗಿ ಲೆಯೊಮೆಡಾನ್ ಗೆ ಆಶ್ವಾಸನೆ ನೀಡಿ ತನ್ನ ಸಹಾಯಕ್ಕೆ ಬದಲಾಗಿ
ಲೆಯೊಮೆಡಾನ್ ಗೆ ಅವನ ಅಜ್ಜನಿಂದ ಬಳುವಳಿಯಾಗಿ ಬಂದಿರುವ ಅಪೂರ್ವ ಕುದುರೆಗಳನ್ನು
ಕೇಳುತ್ತಾನೆ. ಬಂದಿರುವ ಗಂಡಾಂತರ ಮೊದಲು ತೊಲಗಿದರೆ ಸಾಕು ಎಂದು ಲೆಯೊಮೆಡಾನ್ ಅವನ
ಪ್ರಸ್ತಾವನೆಯನ್ನು ಕೂಡಲೇ ಒಪ್ಪುತ್ತಾನೆ. ಅದರಂತೆ ಹಿರಾಕಲ್ಸ್ ಸಮುದ್ರ
ರಾಕ್ಷಸನೊಂದಿಗೆ ಸೆಣಸಾಡಿ ಅವನನ್ನು ಕೊಂದು ಹೀಸಿಯೋನಳನ್ನು ರಕ್ಷಿಸುತ್ತಾನೆ; ನಂತರ
ಒಪ್ಪಂದದಂತೆ ಕುದುರೆಗಳನ್ನು ಕೊಡುವಂತೆ ಕೇಳಿದಾಗ ಲೆಯೊಮೆಡಾನ್ ನಿರಾಕರಿಸುತ್ತಾನೆ.
ಇದರಿಂದ ವ್ಯಗ್ರಗೊಂಡ ಹಿರಾಕಲ್ಸ್ ತನ್ನ ಇನ್ನಿಬ್ಬರು ಸಹಚರರಾದ ಪೆಲಿಯಸ್ ಮತ್ತು
ಟೆಲಮಾನ್ ರೊಂದಿಗೆ ಸೇರಿ ಟ್ರಾಯ್ ನಗರವನ್ನು ದಾಳಿ ಮಾಡಿ ಲೆಯೊಮೆಡಾನ್ ಮತ್ತು ಅವನ ಗಂಡು
ಮಕ್ಕಳನ್ನು ಕೊಲ್ಲುತ್ತಾರೆ; ಹೀಸಿಯೋನಳು ತನ್ನ ಕೈಗಳಿಂದ ಚಿನ್ನದ ಕುಸುರಿ ಮಾಡಿದ
ಮುಖಪರದೆಗೆ ಆಕರ್ಷಿತನಾಗಿ ಹಿರಾಕಲ್ಸನು ಆ ಪರದೆಗೆ ಬದಲಾಗಿ ಲೆಯೊಮೆಡಾನ್ ನ ಕಿರಿಯ
ಮಗನಾದ ಪೊಡಾರ್ಸಸ್ ನನ್ನು ಉಳಿಸುತ್ತಾನೆ. ತನ್ನ ಸಹಚರನಾದ ಟೆಲಮಾನ್ ಗೆ ಹೀಸಿಯೋನಳನ್ನು
ಕೊಡುತ್ತಾನೆ; ಅವನು ಅವಳನ್ನು ಗ್ರೀಸ್ನ ಸಲಾಮಿಸ್ ಎಂಬಲ್ಲಿಗೆ ಒಯ್ಯುತ್ತಾನೆ.
ಹೀಸಿಯೋನಾಳ ಮುಖಪರದೆಯನ್ನು ಕೊಟ್ಟು ಬದುಕುಳಿದ ಪೊಡಾರ್ಸಸ್ ಅಂದಿನಿಂದ ಪ್ರಿಯಮ್
ಎಂದು ಹೆಸರು ಪಡೆಯುತ್ತಾನೆ.
ಪ್ರಿಯಮ್ ನ ಹೆಂಡತಿ ಹೆಕಬೆ ಒಂದು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಈ
ದಂಪತಿಯ ಮೊದಲ ಮಗಳು ಕಸ್ಸಾಂದ್ರ, ಹುಟ್ಟಿದ ಗಂಡು ಮಗುವಿನಿಂದ ಟ್ರಾಯ್ ನಗರವು
ನಾಶವಾಗುವುದೆಂದೂ, ಆದ್ದರಿಂದ ಅದನ್ನು ಕೂಡಲೇ ಕೊಲ್ಲಬೇಕೆಂದು ಭವಿಷ್ಯ ನುಡಿಯುತ್ತಾಳೆ. ಆ
ಮಗುವನ್ನು ಕೊಲ್ಲಲು ತೆಗೆದುಕೊಂಡು ಹೋದಾಗ ದನಗಾಹಿಗಳು ಆ ಮಗುವನ್ನು ರಕ್ಷಿಸಿ ತಮ್ಮ
ಮನೆಯಲ್ಲಿ ಬೆಳೆಸುತ್ತಾರೆ. ಈ ಮಗುವೇ ಪ್ಯಾರಿಸ್; ಪ್ಯಾರಿಸ್ ದನಗಾಹಿಗಳ ಮನೆಯಲ್ಲಿ
ಬೆಳೆದು ದೊಡ್ಡವನಾಗಿ, ಇಡಾ ಪರ್ವತದ ತಪ್ಪಲಿನ ಹೊಲಗಳಲ್ಲಿ ಪಶುಗಳನ್ನು ಮೇಯಿಸಿಕೊಂಡು
ತಾನೂ ದನಗಾಹಿಯಾಗುತ್ತಾನೆ. ಒಂದು ದಿನ ಪ್ರಿಯಮ್ ನ ಮತ್ತೊಬ್ಬ ಮಗ ಹೆಕ್ಟರ್ ಒಂದು
ಹಬ್ಬಕ್ಕೆ ಪಶುಗಳನ್ನು ಒಯ್ಯಲು ಈ ಪರ್ವತದ ತಪ್ಪಲಿಗೆ ಬಂದು ಅರಿಯದೆ ಇತರ ಪಶುಗಳೊಂದಿಗೆ
ಪ್ಯಾರಿಸನ ಮೆಚ್ಚಿನ ಒಂದು ಎಳೆ ಹಸುವನ್ನೂ ಒಯ್ಯುತ್ತಾನೆ. ತನ್ನ ಮೆಚ್ಚಿನ ಹಸು
ಇಲ್ಲದ್ದನ್ನು ಕಂಡ ಪ್ಯಾರಿಸ್, ಹೆಕ್ಟರ್ ಅದನ್ನು ಒಯ್ದಿರಬಹುದೆಂದು ಎಣಿಸಿ ಅದನ್‍ನು
ಹಿಂಪಡೆಯಲು ಟ್ರಾಯ್ ನಗರಕ್ಕೆ ಬರುತ್ತಾನೆ. ಈ ಸಮಯದಲ್ಲಿ ಟ್ರಾಯ್ ನಲ್ಲಿ ನಡೆಯುತ್ತಿದ್ದ
ಅಥ್ಲೆಟಿಕ್ಸ್ ಪಂದ್ಯಗಳಲ್ಲಿ ಪಾಲ್ಗೊಂಡು, ಗೆದ್ದನಂತರ ಅಲ್ಲಿನ ರಾಜಮನೆತನದವರಿಗೆ ಇವನು
ತಮ್ಮ ಮನೆತನದ ಪುತ್ರನೆಂದು ತಿಳಿದಮೇಲೆ ಅರಮನೆಗೆ ಹಿಂದಿರುಗುತ್ತಾನೆ.
ಈ
ಮಧ್ಯೆ ಪೆಲಿಯಸ್ ಎಂಬ ದೇವನು ಥೀಟಿಸ್ ಎಂಬ ಸಮುದ್ರದ ಅಪ್ಸರೆಯ
ಪ್ರೇಮದಲ್ಲಿ ಬೀಳುತ್ತಾನೆ. ದೇವರಾಜನಾದ ಜ್ಯೂಸನಿಗೂ ಈ ಥೀಟಿಸ್ ಮೇಲೆ ಮೋಹ
ಉಂಟಾಗುತ್ತದೆ; ಆದರೆ ಆಕೆ ಜನ್ಮ ಕೊಡುವ ಪುತ್ರನು ತನ್ನ ತಂದೆಯನ್ನು
ಮೀರಿಸುವವನಾಗುತ್ತಾನೆ ಎಂಬ ಭವಿಷ್ಯ ನುಡಿಯ ಅನುಸಾರ, ತನ್ನ ಸ್ಥಾನಕ್ಕೆ ಕುಂದು
ಬರುವುದೆಂದು ಎಣಿಸಿ ಥೀಟಿಸ್-ಪೆಲಿಯಸ್ ರ ವಿವಾಹಕ್ಕೆ ಅಸ್ತು ಎನ್ನುತ್ತಾನೆ. ಇವರ
ಮದುವೆಗೆ ದೇವಾನುದೇವತೆಗಳನ್ನು ಆಹ್ವಾನಿಸಿ, ಇಂಥಹ ಸಂತೋಷಕೂಟದಲ್ಲಿ ಕಲಹವನ್ನು
ಸುಮ್ಮನೆ ಮೇಲೆಳೆದುಕೊಳ್ಳುವುದು ಏಕೆ ಎಂದು ಕಲಹಕ್ಕೆ ಅಧಿಪತಿಯಾದ ಎರಿಸ್ ದೇವತೆಯನ್ನು
ಆಹ್ವಾನಿಸಿರುವುದಿಲ್ಲ. ಇದರಿಂದ ವ್ಯಗ್ರಗೊಂಡ ಕಲಹ ದೇವತೆಯು, ಔತಣಕೂಟದಲ್ಲಿ ಯಾರ
ಸಖ್ಯಕ್ಕಾಗಿ ತನ್ನು ಕಡಿಗಣಿಸಲಾಗಿದೆಯೊ ಆ ಪರಮ ಸುಂದರ ಹೆಣ್ಣು ದೇವತೆಗಳ ನಡುವೆ ಕಲಹ
ತಂದಿಡಲು ಒಂದು ಸಂಚನ್ನು ರೂಪಿಸುತ್ತಾಳೆ. ಒಂದು ಚಿನ್ನದ ಸೇಬನ್ನು ಸೃಷ್ಟಿಸಿ ಅದರ ಮೇಲೆ
'ಪರಮ ಸುಂದರಿಗೆ ಮಾತ್ರ' ಬರೆದು ಔತಣ ಕೂಟದಲ್ಲಿ ಸಂಭ್ರಮದಲ್ಲಿದ್ದ ಜ್ಯೂಸ್ ನ ಹೆಂಡತಿ
ಹೆರಾ, ಅವನ ಒಬ್ಬ ಮಗಳು ಅಥೀನಾ ಹಾಗೂ ಆತನ ಮತ್ತೊಬ್ಬ ಮಗಳು ಅಫ್ರೊಡೈಟ್ ಎಂಬ ಮೋಹಕ
ಹೆಣ್ಣು ದೇವತೆಗಳ ನಡುವೆ ಆ ಸೇಬು ಬಂದು ಬೀಳುವಂತೆ ಮಾಡುತ್ತಾಳೆ. ಈ ಮಾಯದ ಸೇಬನ್ನು
ಕಂಡ ಈ ಸುಂದರ ದೇವತೆಗಳು ಅದು ತನಗೇ ಸೇರಬೇಕು ಎಂದು ಎಂದು ತಮ್ಮಲ್ಲೇ
ಜಗಳವಾಡತೊಡಗುತ್ತಾರೆ. ತಮ್ಮಲ್ಲಿ ಯಾರು ಪರಮ ಸುಂದರಿ ಎಂದು ತೀರ್ಮಾನಿಸಿ ಈ ಕಲಹವನ್ನು
ಬಗೆಹರಿಸುವಂತೆ ಅಲ್ಲೇ ಇದ್ದ ದೇವತೆಗಳ ರಾಜನಾದ ಜ್ಯೂಜ್ ನನ್ನು ಕೇಳುತ್ತಾರೆ. ಅದಕ್ಕೆ
ಆತ ಒಬ್ಬರನ್ನು ಆಯ್ಕೆ ಮಾಡಿದರೆ ಇನ್ನಿಬ್ಬರ ಮುನಿಸನ್ನು ತಾನು ಎದುರಿಸಬೇಕಾಗುತ್ತದೆ
ಎಂದು ಬಗೆದು ಅದನ್ನು ಬಗೆಹರಿಸುವಂತೆ ಇಡಾ ಸಮೀಪದ ಗರ್ಗಾರಸ್ ಪರ್ವತದ ತಪ್ಪಲಲ್ಲಿ
ಗೋಪಾಲಕನಾಗಿರುವ ಪರಮ ಸುಂದರ ಪ್ಯಾರಿಸನು ತೀರ್ಮಾನಿಸಲಿ ಎಂದು ಅವನ ಬಳಿಗೆ ಈ ಮೂವರು
ದೇವತೆಗಳನ್ನು ಕರೆದುಕೊಂಡು ಹೋಗಲು ಹರ್ಮಿಸ್ ಗೆ ಹೇಳುತ್ತಾನೆ.
ಸರಿ
ಈ ಮೂವರು ಸುಂದರಿಯರು ಸ್ಪರ್ಧೆಯಲ್ಲಿ ಗೆಲ್ಲಲು ತಯಾರಿಮಾಡಿಕೊಳ್ಳಲು
ಅನುವಾಗುತ್ತಾರೆ. ಇಡಾ ಪರ್ವತದ ಚಿಲುಮೆಯಲ್ಲಿ ಮಿಂದು ಗೋವುಗಳನ್ನು ಕಾಯುತ್ತಿದ್ದ
ಪ್ಯಾರಿಸ್ ನ ಬಳಿ ಬರುತ್ತಾರೆ. ಪರಮ ಸುಂದರಿಯರ ದೇಹ ಸೌಂದರ್ಯವನ್ನು ಸವಿಯುವ ಇಂಥ
ಸದಾವಕಾಶವನ್ನು ಅರಿತ ಪ್ಯಾರಿಸನು ಅವರ ಸೌಂದರ್ಯವನ್ನು ಅಳೆಯಲು ಒಬ್ಬಬ್ಬೊರಾಗಿ ತನ್ನ
ಮುಂದೆ ವಿವಸ್ತ್ರರಾಗುವಂತೆ ಹೇಳುತ್ತಾನೆ. ಅದರಂತೆ ಅವರು ಅವನ ಮುಂದೆ ಬೆತ್ತಲಾಗಿ
ಬರುತ್ತಾರೆ. ಮೂವರೂ ಸಮನಾಗಿ ಸರ್ವಾಂಗ ಸುಂದರಿಯರಿಯರಾಗಿ ಕಾಣುತ್ತಾರೆ; ಅವನಿಗೆ
ತೀರ್ಮಾನಿಸಲು ಆಗುವುದಿಲ್ಲ. ಆಗ ಒಬ್ಬೊಬ್ಬ ಸುಂದರಿಯೂ ತನ್ನನ್ನೇ ಆಯ್ಕೆ ಮಾಡುವಂತೆ
ಪ್ಯಾರಿಸನಿಗೆ ಆಮಿಶವೊಡ್ಡಲು ಮುಂದಾಗುತ್ತಾರೆ. ಹೆರಾ ತನ್ನನ್ನು ಆಯ್ಕೆ ಮಾಡಿದರೆ
ಏಷ್ಯಾ ಮತ್ತು ಯುರೋಪಿನ ಮಾಲೀಕತ್ವವನ್ನು ಕೊಡುವುದಾಗಿ ಹೇಳಿದರೆ, ಅಥೀನಾ ಯುದ್ಧದ
ಕೌಶಲ್ಯ ಮತ್ತು ಜಾಣ್ಮೆಯನ್ನು ಧಾರೆ ಎರೆಯುವುದಾಗಿ ಹೇಳುತ್ತಾಳೆ; ಇನ್ನು ಅಫ್ರೊಡೈಟ್
ಭೂಲೋಕದ ಅಪ್ರತಿಮ ಸುಂದರಿಯಾದ ಹೆಲೆನಳ ಪ್ರೇಮವನ್ನು ಕರುಣಿಸುವುದಾಗಿ ಹೇಳುತ್ತಾಳೆ.
ಇದರಿಂದ ಮೋಹಿತನಾದ ಪ್ಯಾರಿಸನು, ಹೆಲೆನಳ ಪ್ರೇಮಕ್ಕಾಗಿ ಆಫ್ರೊಡೈಟಳನ್ನು ಪರಮ ಸುಂದರಿ
ಎಂದು ತೀರ್ಮಾನಿಸಿ ಆ
ಚಿನ್ನದ ಸೇಬನ್ನು ಅವಳಿಗೆ ನೀಡುತ್ತಾನೆ. ಇದರಿಂದ ಕ್ರೋಧಗೊಂಡ ಅಥೀನಾ ಮತ್ತು ಹೆರಾ
ಹೆಲೆನಳನ್ನು ದ್ವೇಷಿಸುತ್ತಾರೆ.
ಜಗತ್ತಿನ
ಅಪೂರ್ವ ಸುಂದರಿಯಾದ ಹೆಲೆನ್
ಸಹ ದೇವತೆಗಳ ರಾಜನಾದ ಜ್ಯೂಸ್ ಮತ್ತು ಲಿಡಾರ ಸಂಗಮದಿಂದ ಜನಿಸಿದ ಪುತ್ರಿ ಹೆಲೆನ್. ಅವಳ
ಜನನ ವೃತ್ತಾಂತ ಕೌತುಕವಾಗಿದೆ! ಜ್ಯೂಸನು ಹಂಸದ ರೂಪದಲ್ಲಿದ್ದಾಗ ಒಂದು ಹದ್ದು ಈ
ಹಂಸವನ್ನು ಅಟ್ಟಿಸಿಕೊಂಡು ಬರುವಾಗ ಹಂಸವು ಲಿಡಾಳ ಮನೆಯನ್ನು ಹೊಕ್ಕಿ
ಅಡಗಿಕೊಳ್ಳುತ್ತದೆ. ಲಿಡಾ ಈ ಸುಂದರ ಹಂಸವನ್ನು ಕಂಡು ನೇವರಿಸಿ ಮುದ್ದಿಸುತ್ತಾಳೆ.
ಹಂಸದೊಳಗಿನ ಜ್ಯೂಸನಿಗೂ ಲಿಡಾಳ ಮೇಲೆ ಮೋಹವುಂಟಾಗುತ್ತದೆ; ಹಂಸವು ಅವಳೊಂದಿಗೆ
ಮಿಲನವಾಗಿ ಬರುವ ಮೊಟ್ಟೆಯೊಂದರಿಂದ ಹೆಲೆನಳ ಜನನವಾಗುತ್ತದೆ. ಹೀಗೆ ದೇವತೆಗಳ ರಾಜ
ಜ್ಯೂಸ್ ಮತ್ತು ಲಿಡಾರ ಸಂಗಮದಿಂದ ಜನಿಸಿದ ಹೆಲೆನ್ ಜಗತ್ತಿನ ಅಪ್ರತಿಮ ಸುಂದರಿಯಾಗಿ
ಬೆಳೆಯುತ್ತಾಳೆ. ಹೆಲೆನೆಳ ಸಾಕು ತಂದೆ
ಟಿಂಡೇರಿಯಸ್ ಹೆಲೆನಳ ಅಪ್ರತಿಮ ಸೌಂದರ್ಯವು ಒಂದು ದಿನ ತನ್ನ ಕುಟುಂಬಕ್ಕೆ, ರಾಜ್ಯಕ್ಕೆ
ಮಾರಕವಾಗುವುದು ಎಂದು ಚಿಂತಿತನಾಗಿರುತ್ತಾನೆ. ಆಕೆಯನ್ನು ವರಿಸಲು ಎಷ್ಟೋ ರಾಜಕುಮಾರರು
ಕಾತುರಾಗಿ ಇದ್ದುದೇ ಅವನ ಚಿಂತೆಗೆ ಕಾರಣವಾಗಿತ್ತು. ವರಿಸಲಾಗದ ರಾಜಕುಮಾರರ ಆಕ್ರೋಶಕ್ಕೆ
ತಾನು, ತನ್ನ ರಾಜ್ಯ ಗುರಿಯಾಗುವುದೆಂಬ ಆತಂಕ ಅವನಲ್ಲಿತ್ತು. ಈ ಮಧ್ಯೆ ಒಡೀಸಿಯಸ್ ಎಂಬ
ಮತ್ತೋರ್ವ ಗ್ರೀಕ್ ವೀರ ಟಿಂಡೇರಿಯಸ್ ನ ಸಹಾಯಕ್ಕೆ ಬರುತ್ತಾನೆ. ಹೆಲೆನಳ ಮದುವೆಯನ್ನು
ಯಾವುದೇ ಕಲಹವಿಲ್ಲದೆ ನೆರವೇರಿಸುವ ಉಪಾಯವನ್ನು ಹೇಳಿಕೊಡುತ್ತಾನೆ.
........ಮುಂದುವರಿಯುವುದು.

No comments:
Post a Comment