ರಾಜಕಾರಣವೇ ಧರ್ಮವನ್ನು ರೂಪಿಸಿದೆಯೇ ಎಂಬ ಅನುಮಾನದ ಎಳೆಯನ್ನು ಹಿಡಿದು ಇತಿಹಾಸವನ್ನು
ಕೆದಕಿದರೆ ರೋಚಕ ರೋಚಕ ಸಂಗತಿಗಳು ಸಿಗುತ್ತವೆ. ಹೋಮರನ ಮಹಾಕಾವ್ಯ ಇಲಿಯಾಡ್ ನಲ್ಲಿ
ಪುರಾತನ ಗ್ರೀಕರ ದೇವತೆಗಳ ನಡುವೆಯೇ ನಡೆದ ಟ್ರೋಜನ್ ಯುದ್ಧದ ವೃತ್ತಾಂತವೇ ರೋಚಕವಾಗಿದೆ.
ಇದಕ್ಕೂ ಮುನ್ನ ಗ್ರೀಕ್ ದೇವತೆಗಳ ಬಗ್ಗೆ ಹೇಳಬೇಕು. ಭಾರತೀಯ ಪುರಾಣಕ್ಕೂ ಗ್ರೀಕ್
ಪುರಾಣಕ್ಕೂ ತುಂಬ ಸಾಮ್ಯತೆ ಇದೆ. ಭಾರತೀಯ ಪುರಾಣದಲ್ಲಿರುವಂತೆ ದೇವತೆಗಳ ಬಾಹುಳ್ಯ
ಗ್ರೀಕರಲ್ಲೂ ಇದೆ. ದೇವತೆಗಳ ರಾಜ ಜ್ಯೂಜ್, ಈತ ಆಕಾಶ, ಗುಡುಗು, ಮಿಂಚು, ಮಳೆ ಇವುಗಳ
ಕರ್ತ; ಪೊಸೀಡನ್, ಸಮುದ್ರ ಮತ್ತು ಭೂಕಂಪನಗಳ ಕತೃ; ಹೇಡ್ಸ್, ಸಾವು ಮತ್ತು ಪಾತಾಳವನ್ನು
ನಿಗ್ರಹಿಸುವ ದೇವರು; ಸೂರ್ಯನನ್ನು ನಿಗ್ರಹಿಸುವ ದೇವರು ಹೀಲಿಯೋಸ್; ಜ್ಯೂಜ್ ನ ಮಗಳಾದ
ಅಥೀನಾ ವಿವೇಕ ಮತ್ತು ಸಮರಕಲೆಯ ದೇವತೆ; ಅಫ್ರೊಡೈಟ್ ಕಾಮದ ದೇವತೆ; ಇಲ್ಲಿನ ಗ್ರಾಮ
ದೇವರುಗಳಂತೆ ಗ್ರೀಕರಲ್ಲಿ ಒಂದೊಂದು ಊರಿಗೂ ಒಂದು ದೇವರು. ಅಥೆನ್ಸ್ ನಗರದ ದೇವತೆ
ಅಥೀನಾ; ಡೆಲ್ಫಿ ಮತ್ತು ಡೆಲಾಸ್ ನಗರಕ್ಕೆ, ಅಪೊಲೊ; ದೇವತೆಗಳ ರಾಜ ಜ್ಯೂಜ್ ಒಲಂಪಿಯಾ
ನಗರಕ್ಕೆ, ಕಾಮದ ದೇವರು ಕೊರಿಂಥ್ ನಗರಕ್ಕೆ. ಉಳಿದ ದೇವರುಗಳು ಹೊರದೇಶಗಳ ಅಧಿಪತಿಗಳು.
ಪೊಸೀಡನ್ ಈಥಿಯೋಪಿಯಾ ಮತ್ತು ಟ್ರಾಯ್ ದೇಶಗಳಿಗೆ, ಯಾರಿಸ್ ಥ್ರೇಸ್ ದೇಶಕ್ಕೆ.
![]() |
| ಪ್ಯಾರಿಸನು ಅಥೀನಾ, ಹೆರಾ ಮತ್ತು ಅಫ್ರೊಡೈಟ್ ರಲ್ಲಿ ಯಾರು ಅಪ್ರತಿಮ ಸುಂದರಿ ಎಂದು ಪರೀಕ್ಷಿಸುತ್ತಿರುವುದು |
ಹೀಗೆ
ಗ್ರೀಕ್ ಪುರಾಣದಲ್ಲಿ ಪ್ರತಿಯೊಂದಕ್ಕೂ ಒಂದೊಂದು ದೇವರು ಇವೆ. ಅಲ್ಲಿನ ದೇವತೆಗಳಿಗೆ
ಮಾನವರಲ್ಲಿರುವ ವಾಂಛೆಯೂ ಇತ್ತು. ಮಾನವರೊಂದಿಗೆ ಅವರ ಒಡನಾಟವಿರುತ್ತಿತ್ತು; ಐಹಿಕ
ವಾಂಛೆಗಾಗಿ ದೇವತೆಗಳ ನಡುವೆ ಯುದ್ಧವಾಗುತ್ತಿತ್ತು. ಯುದ್ಧದಲ್ಲಿ ಒಂದು ಗುಂಪಿನ
ದೇವತೆಗಳು ಇನ್ನೊಂದು ಗುಂಪಿನ ದೇವತೆಗಳನ್ನು ಮುಗಿಸುವ ಹಂಚಿಕೆಯಲ್ಲಿರುತ್ತಿದ್ದರು.
ಇಲಿಯಾಡ್ ಕಾವ್ಯದಲ್ಲಿ ಹೇಳುವಂತೆ ದೇವತೆಗಳ ನಡುವಿನ ಯುದ್ಧವು ಭೂಮಿಯಲ್ಲಿ ಅವರ
ಅನುಯಾಯಿಗಳ ನಡುವೆ ಆಗುತ್ತಿದ್ದ ಯುದ್ಧಗಳಿಂದ ಪ್ರೇರಿತವಾಗಿರುತಿತ್ತು. ನಮ್ಮ
ಪುರಾಣದಲ್ಲಿರುವ, ರಾಮಾಯಣ, ಮಹಾಭಾರತದ ಯುದ್ಧಗಳಂತೆ ಗ್ರೀಕ್ ಪುರಾಣದಲ್ಲಿ ಟ್ರೋಜನ್
ಯುದ್ಧ ತುಂಬ ರೋಚಕ. ಅದು ಮನುಷ್ಯರ ನಡುವೆ ನಡೆಯುವ ಯುದ್ಧದ ಎಲ್ಲ ಗುಣಗಳನ್ನು
ಮೈಗೂಡಿಸಿಕೊಂಡಿದೆ. ಇದು ಶುರುವಾದದ್ದು ಒಂದು ಹೆಣ್ಣಿನ ಮೇಲಿನ ವ್ಯಾಮೋಹ ಮತ್ತು ಅವಳ
ಅಪಹರಣದಿಂದ. ಅವಳನ್ನು ಮತ್ತೆ ವಾಪಾಸು ಕರೆತರುವ ವೃತ್ತಾಂತವೇ ಈ ಯುದ್ಧದ ಇಡೀ ಹಂದರ. ಈ
ಹೆಣ್ಣೇ ಭೂಲೋಕದ ಪರಮ ಸುಂದರಿ, ಸೌಂದರ್ಯದ ಎಲ್ಲ ಆಯಾಮಗಳನ್ನು ತನ್ನೊಬ್ಬಳಲ್ಲೇ
ಮೈಗೂಡಿಸಿಕೊಂಡಿರುವ ಸ್ಪಾರ್ಟಾ ರಾಜ್ಯದ ಮಹಾರಾಣಿ ಹೆಲೆನ್. ಇವಳನ್ನು ಮೋಹಿಸುವವನು
ಟ್ರಾಯ್ ದೇಶದಲ್ಲಿ ಗೋಪಾಲಕನಾಗಿ ಇರುವ ಮತ್ತೊಬ್ಬ ಸುಂದರ ಗ್ರೀಕ್ ದೇವತೆ ಪ್ಯಾರಿಸ್.
ದೇವತೆಗಳ ರಾಜನಾದ ಜ್ಯೂಜ್ ಪೆಲಿಯಸ್ ಮತ್ತು ಥೀಟಿಸ್ ಎಂಬ ದೇವತೆಗಳ ಮದುವೆಯ
ಸಂಭ್ರಮದಲ್ಲಿ ಒಂದು ಮಹಾ ಔತಣಕೂಟವನ್ನು ಏರ್ಪಡಿಸಿ ಅದಕ್ಕೆ ದೇವಾನುದೇವತೆಗಳನ್ನು
ಆಹ್ವಾನಿಸಿ, ಇಂಥಹ ಸಂತೋಷಕೂಟದಲ್ಲಿ ಕಲಹವನ್ನು ಸುಮ್ಮನೆ ಮೇಲೆಳೆದುಕೊಳ್ಳುವುದು ಏಕೆ
ಎಂದು ಕಲಹಕ್ಕೆ ಅಧಿಪತಿಯಾದ ಎರಿಸ್ ದೇವತೆಯನ್ನು ಆಹ್ವಾನಿಸಿರುವುದಿಲ್ಲ. ಇದರಿಂದ
ವ್ಯಗ್ರಗೊಂಡ ಕಲಹ ದೇವತೆಯು, ಔತಣಕೂಟದಲ್ಲಿ ಯಾರ ಸಖ್ಯಕ್ಕಾಗಿ ತನ್ನು ಕಡಿಗಣಿಸಲಾಗಿದೆಯೊ
ಆ ಪರಮ ಸುಂದರ ಹೆಣ್ಣು ದೇವತೆಗಳ ನಡುವೆ ಕಲಹ ತಂದಿಡಲು ಒಂದು ಸಂಚನ್ನು ರೂಪಿಸುತ್ತಾಳೆ.
ಒಂದು ಚಿನ್ನದ ಸೇಬನ್ನು ಸೃಷ್ಟಿಸಿ ಅದರ ಮೇಲೆ 'ಪರಮ ಸುಂದರಿಗೆ ಮಾತ್ರ' ಬರೆದು ಔತಣ
ಕೂಟದಲ್ಲಿ ಸಂಭ್ರಮದಲ್ಲಿದ್ದ ಅಥೀನಾ, ಹೆರಾ ಮತ್ತು ಅಫ್ರೊಡೈಟ್ ಎಂಬ ಹೆಣ್ಣು ದೇವತೆಗಳ ನಡುವೆ ಆ ಸೇಬು ಬಂದು
ಬೀಳುವಂತೆ ಮಾಡುತ್ತಾಳೆ. ಈ ಮಾಯದ ಸೇಬನ್ನು ಕಂಡ ಈ ಸುಂದರ ದೇವತೆಗಳು ಅದು ತನಗಾಗಿಯೇ
ಬಂದಿದೆ ಎಂದು ತಮ್ಮಲ್ಲೇ ಕಿತ್ತಾಡತೊಡಗುತ್ತಾರೆ. ತಮ್ಮಲ್ಲಿ ಯಾರು ಪರಮ ಸುಂದರಿ ಎಂದು
ತೀರ್ಮಾನಿಸಿ ಈ ಕಲಹವನ್ನು ಬಗೆಹರಿಸುವಂತೆ ಅಲ್ಲೇ ಇದ್ದ ದೇವತೆಗಳ ರಾಜನಾದ ಜ್ಯೂಜ್
ನನ್ನು ಕೇಳುತ್ತಾರೆ. ಅದಕ್ಕೆ ಆತ ಒಬ್ಬರನ್ನು ಆಯ್ಕೆ ಮಾಡಿದರೆ ಇನ್ನಿಬ್ಬರ ಮುನಿಸನ್ನು
ತಾನು ಎದುರಿಸಬೇಕಾಗುತ್ತದೆ ಎಂದು ಬಗೆದು ಅದನ್ನು ಬಗೆಹರಿಸುವಂತೆ ಗೋಪಾಲಕನಾಗಿರುವ ಪರಮ
ಸುಂದರ ದೇವರು ಪ್ಯಾರಿಸ್ ಗೆ ವಹಿಸುತ್ತಾನೆ.
ಸರಿ ಈ ಮೂವರು ಸುಂದರಿಯರು ಸ್ಪರ್ಧೆಯಲ್ಲಿ ಗೆಲ್ಲಲು ತಯಾರಿಮಾಡಿಕೊಳ್ಳಲು
ಅನುವಾಗುತ್ತಾರೆ. ಇಡಾ ಪರ್ವತದ ಚಿಲುಮೆಯಲ್ಲಿ ಮಿಂದು ಗೋವುಗಳನ್ನು ಕಾಯುತ್ತಿದ್ದ
ಪ್ಯಾರಿಸ್ ನ ಬಳಿ ಬರುತ್ತಾರೆ. ಪರಮ ಸುಂದರಿಯರ ದೇಹ ಸೌಂದರ್ಯವನ್ನು ಸವಿಯುವ ಇಂಥ
ಸದಾವಕಾಶವನ್ನು ಅರಿತ ಪ್ಯಾರಿಸನು ಅವರ ಸೌಂದರ್ಯವನ್ನು ಅಳೆಯಲು ಒಬ್ಬಬ್ಬೊರಾಗಿ ತನ್ನ
ಮುಂದೆ ವಿವಸ್ತ್ರರಾಗುವಂತೆ ಹೇಳುತ್ತಾನೆ. ಅದರಂತೆ ಅವರು ಅವನ ಮುಂದೆ ಬೆತ್ತಲಾಗಿ
ಬರುತ್ತಾರೆ. ಮೂವರೂ ಸಮನಾಗಿ ಸರ್ವಾಂಗ ಸುಂದರಿಯರಿಯರಾಗಿ ಕಾಣುತ್ತಾರೆ; ಅವನಿಗೆ
ತೀರ್ಮಾನಿಸಲು ಆಗುವುದಿಲ್ಲ. ಆಗ ಒಬ್ಬೊಬ್ಬ ಸುಂದರಿಯೂ ತನ್ನನ್ನೇ ಆಯ್ಕೆ ಮಾಡುವಂತೆ
ಪ್ಯಾರಿಸನಿಗೆ ಆಮಿಶವೊಡ್ಡಲು ಮುಂದಾಗುತ್ತಾರೆ. ಹೆರಾ ತನ್ನನ್ನು ಆಯ್ಕೆ ಮಾಡಿದರೆ
ಏಷ್ಯಾ ಮತ್ತು ಯುರೋಪಿನ ಮಾಲೀಕತ್ವವನ್ನು ಕೊಡುವುದಾಗಿ ಹೇಳಿದರೆ, ಅಥೀನಾ ಯುದ್ಧದ
ಕೌಶಲ್ಯ ಮತ್ತು ಜಾಣ್ಮೆಯನ್ನು ಧಾರೆ ಎರೆಯುವುದಾಗಿ ಹೇಳುತ್ತಾಳೆ; ಇನ್ನು ಅಫ್ರೊಡೈಟ್
ಭೂಲೋಕದ ಅಪ್ರತಿಮ ಸುಂದರಿಯಾದ ಹೆಲೆನಳ ಪ್ರೇಮವನ್ನು ಕರುಣಿಸುವುದಾಗಿ ಹೇಳುತ್ತಾಳೆ.
ಇದರಿಂದ ಮೋಹಿತನಾದ ಪ್ಯಾರಿಸನು ಆಫ್ರೊಡೈಟಳನ್ನು ಪರಮ ಸುಂದರಿ ಎಂದು ತೀರ್ಮಾನಿಸಿ ಆ
ಚಿನ್ನದ ಸೇಬನ್ನು ಅವಳಿಗೆ ನೀಡುತ್ತಾನೆ. ಇತ್ತ ಹೆಲೆನಾಳ ಮೋಹಕ್ಕೆ ಬಿದ್ದ ಪ್ಯಾರಿಸನಿಗೆ
ಅವಳು ಅದಾಗಲೇ ಸ್ಪಾರ್ಟಾದ ರಾಜ ಮೆನೆಲಾಸ್ ನ ರಾಣಿಯೆಂದು ಗೊತ್ತಾಗುತ್ತದೆ. ಅಫ್ರೊಡೈಟಳ
ವರದಿಂದ ಪ್ಯಾರಿಸನ ಪ್ರೇಮಪಾಶಕ್ಕೆ ಬಿದ್ದ್ ಹೆಲೆನ್ ಅವನೊಡನೆ ಹೊರಡಲು
ಸಿದ್ಧವಾಗುತ್ತಾಳೆ. ಪ್ಯಾರಿಸ್ ಅವಳನ್ನು ಸ್ಪಾರ್ಟಾದಿಂದ ಟ್ರಾಯ್ ಗೆ
ಕದ್ದೊಯ್ಯುತ್ತಾನೆ. ಇಲ್ಲಿಂದ ಶುರುವಾಗುತ್ತದೆ, ಲಂಕಾದಹನದಂಥಹ ಹತ್ತು ಧೀರ್ಘ ವರ್ಷಗಳ
ಟ್ರೋಜನ್ ಯುದ್ಧ.
......ಮುಂದುವರಿಯುವುದು.

No comments:
Post a Comment