Friday, December 26, 2014

ದೇವರು, ಧರ್ಮ ಮತ್ತು ಸಾಕ್ರೆಟಿಸ್

ಸರಿ ಸುಮಾರು ಎರಡೂವರೆ ಸಾವಿರ ವರ್ಷದ ಹಿಂದೆ ಗ್ರೀಕ್ ದೇಶದ ಅಥೆನ್ಸ್ ನಗರದ ನಾಗರೀಕನೊಬ್ಬ ಜನ ಜೀವನವು ಧರ್ಮದ ಕಪಿಮುಷ್ಠಿಯಲ್ಲಿ ಸಿಲುಕಿ, ವಿಕಾಸಕಾಣದೆ, ಕ್ರಮೇಣ ವಿಶ್ವಾಸ ಕಳೆದುಕೊಂಡು, ಅನೈತಿಕತೆ, ಸ್ವೇಚ್ಛಾಚಾರ, ಅನಾಚಾರ ತಲೆ ಎತ್ತಿದ  ವಿಷಮ ಪರಿಸ್ಥಿತಿಯಲ್ಲಿ ಅದಕ್ಕೆ ಕಾರಣಗಳನ್ನು ಹುಡುಕಿ ಸಾರ್ಥಕ ಜೀವನಕ್ಕೆ ಇರಬೇಕಾದ ಜೀವನ ದೃಷ್ಟಿಯನ್ನು ಜನರಿಗೆ ತಿಳಿಸಿಕೊಟ್ಟಿದ್ದಕ್ಕೆ ಆತನನ್ನು ಧರ್ಮವಿರೋಧ ಪ್ರಚಾರದ ಆಪಾದನೆಗೆ ಗುರಿಪಡಿಸಿ ವಿಶಪ್ರಾಶನ ಮಾಡಿಸಲಾಗುತ್ತದೆ; ಅದಕ್ಕೆ ಮುನ್ನ ಕೊನೆಯ ಅವಕಾಶನೀಡಿ, ತನ್ನೆಲ್ಲ ವಿಚಾರಗಳನ್ನು ಹಿಂಪಡೆದು ಅವು ತಪ್ಪೆಂದು ಹೇಳುವುದಾದರೆ ಜೀವದಾನ ಮಾಡುವುದಾಗಿ ಅಂದಿನ ಆಡಳಿತ ಶಾಹಿ ಹೇಳಿತು. ಅದನ್ನು ಆತ ನಿರಾಕರಿಸಿ "ನನ್ನ ಸಾವಿನಿಂದ ನಾನು ಕಂಡ ಸತ್ಯ ಉಳಿಯಲಿ" ಎಂದು ತಾನೇ ಸ್ವಯಂ ವಿಷವನ್ನು ಸೇವಿಸುತ್ತಾನೆ.

 ಈತನ ಹೆಸರು ಸಾಕ್ರೆಟಿಸ್‌;  ಕ್ರಿ.ಪೂ. 469-399 ರ ಅವಧಿಯಲ್ಲಿ ಗ್ರೀಸ್ ದೇಶದ ಅಥೆನ್ಸ್ ನಲ್ಲಿ ಜೀವಿಸಿದ್ದ ಒಬ್ಬ ಶ್ರೇಷ್ಠ ತತ್ವ ಜ್ಞಾನಿ. ಸತ್ಯವಾದಿ,ನಿಷ್ಟುರವಾದಿಯಾಗಿದ್ದ ಆತ, ಗ್ರೀಕ್ ಸಮಾಜ ವಿಷಮ ಘಟದಲ್ಲಿದ್ದಾಗ, ಅಲ್ಲಿನ ಅನೈತಿಕ, ಸ್ವೇಚ್ಛಾಚಾರದ ಜೀವನ ಕ್ರಮವನ್ನು  ಖಂಡಿಸಿ, ಒಂದು ಆರೋಗ್ಯಕರವಾದ ಸಮಾಜಕ್ಕಿರಬೇಕಾದ, ಗುಣ, ವಿಚಾರ, ಆಚಾರ, ದಿಕ್ಕು, ಧ್ಯೇಯಗಳನ್ನು ಗುರುತಿಸಿ ಸಾರಿದವನು. “ಆತ್ಮವಿಮರ್ಶೆವಿಲ್ಲದ ಅವೈಚಾರಿಕ ಜೀವನ ಕ್ರಮವು ಬಾಳಲು ಯೋಗ್ಯವಾದುದಲ್ಲ” ಎಂಬ ತತ್ವ ಇವನದು. ಸಾಕ್ರಟೀಸ್ ಎಲ್ಲರಿಗೂ ಒಬ್ಬ ವಿಲಕ್ಷಣ ವ್ಯಕ್ತಿಯಂತೆ ಕಾಣುತ್ತಿದ್ದ; ತನ್ನ ಕಟು ವಿಮರ್ಶೆಯ ಮಾತುಗಳಿಂದ ದುರ್ಮಾರ್ಗದಲ್ಲಿದ್ದವರು ಯಾರೇ ಆಗಿರಲಿ, ಎಂಥಾ ಪ್ರಭಾವಿ ರಾಜಕೀಯ ನಾಯಕರಿರಲಿ, ಆಡಳಿತ ಸೂತ್ರಧಾರಿಗಳಾಗಿರಲಿ, ಸಮಾಜದ ಪ್ರತಿಷ್ಠಿತ ವ್ಯಕ್ತಿಗಳಾಗಿರಲಿ ಅವರನ್ನು ತನ್ನ ವಿಚಾರ ವಿಮರ್ಶೆಗೆ ಒಳಪಡಿಸದೆ ಇರುತ್ತಿರಲಿಲ್ಲ. ಆತ ನಿರ್ಭೀಡೆಯಿಂದ ತಪ್ಪನ್ನು ತಪ್ಪೆಂದು ಕಡ್ಡಿ ಮುರಿದಂತೆ ಹೇಳುತ್ತಿದ್ದ. ಸಮಾಜದ ಮೌಡ್ಯವನ್ನು ದಾಕ್ಷಿಣ್ಯವಿಲ್ಲದೆ ತನ್ನ ಪ್ರಖರ ವಿಚಾರಗಳಿಂದ ಬಯಲಿಗೆಳೆಯುತ್ತಿದ್ದ.

 
ಸಾಕ್ರೆಟಿಸ್ ಧಾರ್ಮಿಕ ವ್ಯಕ್ತಿಯಲ್ಲದಿದ್ದರೂ ಧರ್ಮದ ವಿರುದ್ಧ ಒಡಕು ಮಾತುಗಳನ್ನಾಡುತ್ತಿರಲಿಲ್ಲ. ಅಥೆನ್ಸ್ ನ ನಗರದ ದೇವತೆಗಳಿಗೆ ಕೇವಲ ಸೌಜನ್ಯಕ್ಕಾಗಿ ಸೇವೆ ಸಲ್ಲಿಸುತ್ತಿದ್ದ, ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಿದ್ದ. ಬಾಹ್ಯ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮೊದಲು ‘‘ನಿನ್ನನ್ನು ನೀನು ತಿಳಿ’’ ಎಂಬುದು ಅವನ ನಂಬಿಕೆಯಾಗಿತ್ತು. ಎಲ್ಲಾ ಅಧ್ಯಯನಗಳಿಗಿಂತ ಮನುಷ್ಯನ ಕುರಿತ ಅಧ್ಯಯನ ಮತ್ತು ಸಮಾಜದಲ್ಲಿ ಅವನು ಹೇಗೆ ಬಾಳಬೇಕೆಂದು ತಿಳಿಯುವುದೇ ಅತ್ಯಂತ ಮಹತ್ವದ ಅಧ್ಯಯನವೆಂದು ಅವನು ಸಾರಿದನು. ಟೀಕೆಗೊಳಗಾದ ಬದುಕು, ಬದುಕಲು ಯೋಗ್ಯವಲ್ಲ ಎಂದನು. ಧಾರ್ಮಿಕತೆಯೇ ಇಲ್ಲದೆ ನೀತಿವಂತಿಕೆ ಸಾಧ್ಯವಿಲ್ಲವೆ?  ಎಂದು ಸಾಕ್ರೆಟಿಸ್ ಪ್ರಶ್ನಿಸಿದನು. ದೇವರ ಕಲ್ಪನೆಯೇ ಇರದೆ ನೈತಿಕತೆ ಇರಲು ಸಾಧ್ಯವಿಲ್ಲವೇ? ಎಂದು ಕೇಳಿದನು. ಧರ್ಮಮುಕ್ತ, ನೈತಿಕ ಸಂಹಿತೆಯುಕ್ತ ನಾಗರಿಕತೆಯ ಚಿಂತನಾ ಸ್ವಾತಂತ್ರ್ಯವನ್ನು ಉಳಿಸಲು ಸಾಧ್ಯವೆ ಎಂದು ಪ್ರಶ್ನಿಸಿದನು. ಜ್ಞಾನವೇ ಅತ್ಯುತ್ತಮ ಮತ್ತು ಅಜ್ಞಾನವೇ ವ್ಯಸನವೆಂದನು. ಅತ್ಯುತ್ತಮವಾದದ್ದೆ ಸಂತೋಷ. ಅದಕ್ಕೆ ಮೂಲವೇ ಜ್ಞಾನ ಎಂಬುದು ಅವನ ನಂಬಿಕೆಯಾಗಿತ್ತು.

ಸಾಕ್ರೆಟಿಸ್ ಪ್ರಜಾಪ್ರಭುತ್ವದ ವಿರೋಧಿಯಾಗಿದ್ದು, ಶ್ರೀಮಂತ ಪ್ರಭುತ್ವವನ್ನು (ಅರಿಸ್ಟೋಕ್ರಸಿ) ಪ್ರತಿಪಾದಿಸಿದನು. ಜ್ಞಾನ ಮತ್ತು ದಕ್ಷತೆ ಮಾತ್ರ ಅಥೆನ್ಸ್‌ನ ಸರ್ಕಾರವನ್ನು ಉಳಿಸೀತು ಎಂದನು. ಪ್ರಶ್ನಿಸದೆ ಏನನ್ನು ಸ್ವೀಕರಿಸದಿರುವಂತೆ ಸಾಕ್ರೆಟಿಸ್ ತನ್ನ ಶಿಷ್ಯರಿಗೆ ತಿಳಿಸಿದನು. ಇಷ್ಟಾದರೂ ಅಥೆನ್ಸ್‌ನ ಬಹುಸಂಖ್ಯಾತರಿಗೆ ಅವನ ವಿಚಾರಗಳು ಕಿರಿಕಿರಿಯುಂಟು ಮಾಡಿದವು.  ನೈತಿಕತೆಯನ್ನು ಧರ್ಮದಲ್ಲಿ ಬಿಟ್ಟು  ಮನಸಾಕ್ಷಿಯಲ್ಲಿ ಹುಡುಕುವಂತೆ ಅವನು ಹೇಳಿದ್ದು ಅನೇಕರನ್ನು ರೇಗಿಸಿತು. ಇದರಿಂದ ಪ್ರತಿಷ್ಠಿತ ಜನರ ದ್ವೇಷಕ್ಕೆ ಗುರಿಯಾಗುತ್ತಾನೆ. ಸಮಾಜದ ಜನರನ್ನು ಧರ್ಮವಿರೋಧಿ ವಿಚಾರಗಳತ್ತ ಎಳೆದು  ದೇವರಲ್ಲಿನ ಜನರ ನಂಬಿಕೆಗಳನ್ನು ಮುರಿಯುತ್ತಿದ್ದಾನೆ ಎಂದು ಆಪಾದಿಸಲಾಗುತ್ತದೆ.
 
 ವಿಚಾರಣೆಯ ಸಂದರ್ಭದಲ್ಲಿ ಸಾಕ್ರೆಟಿಸ್ ಕೇಳಿದ ಒಂದೇ ಪ್ರಶ್ನೆಯೆಂದರೆ ‘‘ಸಮಾಜವನ್ನು ನಾನು ಭ್ರಷ್ಟಗೊಳಿಸಿರುವೆನೆಂದು ಹೇಳುವುದಾದರೆ ನನ್ನನ್ನು ಭ್ರಷ್ಟಗೊಳಿಸಿದವರು ಯಾರು’’? ಕಾರಾಗೃಹದಲ್ಲಿದ್ದಾಗ ತಪ್ಪಿಸಿಕೊಳ್ಳುವ ಅವಕಾಶವಿದ್ದರೂ, ಅವನು ಹಾಗೆ ಮಾಡಲಿಲ್ಲ. ಕಾರಣ ಸಾಕ್ರೆಟಿಸ್ ತನ್ನ ತತ್ವಗಳಲ್ಲಿ ಅಚಲವಾದ ನಂಬಿಕೆಯನ್ನು ಹೊಂದಿದ್ದು ಮಾತ್ರವಲ್ಲದೆ ಅಮೋಘ ನೈತಿಕ ಶಕ್ತಿಯನ್ನು ಹೊಂದಿದ್ದ. ಕೊನೆಗೆ ಅಂಜದೆ, ಅಳುಕದೆ, ದುಃಖಿಸದೆ, ತನ್ನ 70ನೇ ವಯಸ್ಸಿನಲ್ಲಿ, ಕಾರಾಗೃಹದಲ್ಲಿ  ತಾನೇ ಸ್ವಯಂ ಹೆಮ್ಲಾಕ್ ವಿಷವನ್ನು ಕುಡಿದು ಶಾಂತಿಯಿಂದಲೇ ಸಾವನ್ನು ಅಪ್ಪಿಕೊಂಡ.

ಹೀಗೆ ಸಾವನ್ನು ಅಪ್ಪಿಕೊಂಡ ಸಾಕ್ರಟೀಸ್ ಕುರಿತು ಜೂಲಿಯನ್ ಚಕ್ರವರ್ತಿ ಹೀಗೆ ಹೇಳುತ್ತಾನೆ "ಯುದ್ಧದಲ್ಲಿ ಸಾವಿರ ಸೈನಿಕರ ಜಯಿಸಿದ ವೀರನಲ್ಲ ಸಾಕ್ರೆಟಿಸ್‌;  ಆತ ತನ್ನನ್ನು ತಾನು ಗೆದ್ದ ಋಷಿ; ಸಾಫ್ರೊನಿಸ್ಕನ್ಸಿನ ಮಗನಾದ ಸಾಕ್ರಟೀಸ್ ಅಲೆಕ್ಸಾಂಡರನಿಗಿಂತ ಮಹತ್ವದ ಸಾಧನೆ ಮಾಡಿದ್ದಾನೆ".

ಇಂದಿಗೂ ಭಿನ್ನ ಆಶಯಗಳನ್ನೊತ್ತ ಧರ್ಮಗಳು ಜನರ ರಕ್ತವನ್ನು ಹಿಂಡುತ್ತಿವೆ. ಭಾರತದಲ್ಲಿ ಧರ್ಮವೊಂದು ಹರಿಯೇ ಸರ್ವೋತ್ತಮನು; ಹರಿಯಲ್ಲದೆ ಬೇರೆ ದೇವರು ಉತ್ತಮನೆಂದರೆ ಅಥವ ವಿಷ್ಣುವಿಗೆ ಬ್ರಹ್ಮ ರುದ್ರರು ಸಮರು - ಎಂದು ಹೇಳಿದರೆ ಅವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ; ಸ್ತ್ರೀ, ಶೂದ್ರರಿಗೆ ವೇದಾಧಿಕಾರವಿಲ್ಲ ವೆಂದು ಹೇಳಿದರೆ, ಮತ್ತೊಂದು ಅಲ್ಲಾಹುವಲ್ಲದೆ ಬೇರೆ ದೇವರಿಲ್ಲ, ಪ್ರವಾದಿ ಮಹಮ್ಮದರು ಅಲ್ಲಾಹುವಿನ ಕಟ್ಟ ಕಡೆಯ ಪ್ರವಾದಿ. ಅಲ್ಲಾಹುವನ್ನು ಆರಾಧಿಸುವವರು ಮಾತ್ರ ಸ್ವರ್ಗಕ್ಕೆ ಅರ್ಹರು; ಬೇರೆ ದೇವರುಗಳನ್ನು ಆರಾಧಿಸುವವರನ್ನು ನರಕಕ್ಕೆ ತಳ್ಳಲಾಗುತ್ತದೆ ಎಂದು ಸಾರುತ್ತದೆ. ಪರಸ್ಪರ ವಿರುದ್ಧವಾಗಿರುವ ಧರ್ಮಗಳ ಈ  ಗೊಂದಲದಲ್ಲಿ ಸಿಕ್ಕ ಅಮಾಯಕ ಜನರು ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಅರಿಯಲಾಗದೆ, ನಿರ್ಧರಿಸಲಾಗದೆ ಹೋಗಿದ್ದಾರೆ. ಅಸಲಿಗೆ ಈ ದೇವರು, ಆ ಸ್ವರ್ಗ, ನರಕಗಳು ಇವೆಯೋ ಇಲ್ಲವೋ, ಅಂತೂ ಇಂಥ ಧರ್ಮಗಳು ಜನರನ್ನು ತಮ್ಮದಲ್ಲದ ತಪ್ಪಿಗೆ ಇಲ್ಲಿಯೇ ನರಕಕ್ಕೆ ತಳ್ಳುತ್ತಿವೆ.

ಜನರ ಒಳಿತಿಗಾಗಿ ಹುಟ್ಟಿದ ಧರ್ಮಗಳು ತಮ್ಮ ಉಳಿವಿಗಾಗಿ, ವಿಚಾರ ಶೀಲತೆಯನ್ನು ಕೊಂದು, ವಿಚಾರ ಮಾಡುವುದೇ ಮಹಾಪಾಪವೆಂಬ ಮೌಢ್ಯವನ್ನು ಬಿತ್ತಿ, ತನ್ನ ವಿರುದ್ಧ ನಿಲ್ಲುವ ಪ್ರತಿ ಪ್ರಗತಿಪರ ವಿಚಾರವನ್ನು, ವೈಜ್ಞಾನಿಕ ಸತ್ಯವನ್ನು ಹತ್ತಿಕ್ಕಿ, ಭೂಮಿಯ ಸುತ್ತ ಸೂರ್ಯ ಸುತ್ತುತ್ತಿಲ್ಲ, ಭೂಮಿಯೇ ಸೂರ್ಯನ ಸುತ್ತ ಸುತ್ತುತ್ತಿದೆ ಎಂಬ ಸತ್ಯವನ್ನು ಹೇಳಿದವನನ್ನೇ ಜೀವಂತ ಸುಟ್ಟಿವೆ. ಆ ಕಾಲದಿಂದ ಮೊನ್ನೆಯ ಪೆಶಾವರದ ಮಕ್ಕಳ ಮಾರಣ ಹೋಮದವರೆಗೂ ಧರ್ಮವು ಅದೆಷ್ಟೋ ಅಮಾಯಕರನ್ನು, ತತ್ವಜ್ಞಾನಿಗಳನ್ನು ತನ್ನ ಉಳಿವಿಗಾಗಿ ಬಲಿತೆಗೆದು ಕೊಂಡಿದೆ.

ಇನ್ನೆಷ್ಟು ದಿನ ಈ ಅಟ್ಟಹಾಸವನ್ನು ಜಗತ್ತು ಸಹಿಸಬೇಕು?
   

Friday, December 12, 2014

ಶೈಲೇಂದ್ರನೆಂಬ ಮಾಂತ್ರಿಕ



1947 ಪೂರ್ವಾರ್ಧ; ಸ್ವಾತಂತ್ರ್ಯ ಆಂದೋಲನ ಉತ್ತುಂಗಕ್ಕೇರಿದ್ದ ಸಮಯ; ಅಂದಿನ ಬಾಂಬೆಯ ಒಂದು ಜನನಿಬಿಡ ಸ್ಥಳವೊಂದರಲ್ಲಿ ಸ್ವಾತಂತ್ರ್ಯ ಆಂದೋಲನದ ಒಂದು ಸಾರ್ವಜನಿಕ ಸಭೆಯಲ್ಲಿ ಆವೇಶಭರಿತ ಭಾಷಣಗಳ ನಡುವೆ ಒಬ್ಬ 24 ಉತ್ಸಾಹಿ ತರುಣನೊಬ್ಬ 'ಜಲ್ತಾಹೆ ಪಂಜಾಬ್' (ಹೊತ್ತಿ ಉರಿಯುವ ಪಂಜಾಬ್) ಎಂಬ ತನ್ನ ಕವಿತೆಯೊಂದನ್ನು ಓದಲು ತೊಡಗುತ್ತಾನೆ. ಭಾರತ ವಿಭಜನೆಯ ಹೊಸಿಲಲ್ಲಿ ಇಬ್ಭಾಗವಾಗಿ ಹೋಗುವ ಪಂಜಾಬ್ ಹೊತ್ತಿ ಉರಿಯುವುದರ ಸಂಕಟವನ್ನು ಕಣ್ಣಿಗೆ ಕಟ್ಟುವಂತೆ ಪದಗಳಲ್ಲಿ ಮುತ್ತುಗಳನ್ನು ಪೋಣಿಸಿದಂತೆ ಬರೆದ ಕವಿತೆಯನ್ನು ಓದಿ ಮುಗಿಸಿದ ಕ್ಷಣದಲ್ಲಿ ಮತ್ತೋರ್ವ ಯುವಕ ಯುವ ಕವಿಯೆಡೆಗೆ ಬಂದು ಆತ್ಮೀಯ ಭಾವದಲ್ಲಿ, ಕವಿತೆಯನ್ನು, ಅದನ್ನು ಬರೆದ ಕವಿಯನ್ನು ಶ್ಲಾಘಿಸುತ್ತಾ, ತಾನು ಖ್ಯಾತ ಸಿನಿಮಾ ನಟ, ನಿರ್ಮಾತೃ  ಪೃಥ್ವಿರಾಜ್ ಕಪೂರ್ ರವರ ಪುತ್ರ, ರಾಜ್ ಕಪೂರ್ ಎಂದು ಪರಿಚಯಮಾಡಿಕೊಳ್ಳುತ್ತಾನೆ. ಚಿತ್ರೀಕರಣಗೊಳ್ಳುತ್ತಿರುವ ತನ್ನ ಸಿನಿಮಾ 'ಆಗ್' ಹಾಡಿಗೆ ಕವಿತೆಯು ಹೇಳಿ ಮಾಡಿಸಿದಂತಿದ್ದು ಅದನ್ನು ತಾನು ಖರೀದಿಸಲು ಉತ್ಸುಕನಾಗಿರುವುದಾಗಿ ಹೇಳುತ್ತಾನೆ.  ತಮ್ಮ ಹಾಡುಗಳನ್ನು, ಕಥೆಗಳನ್ನು ಚಿತ್ರ ನಿರ್ಮಾಪಕರ ಬಾಗಿಲಿಗೆ ಒಯ್ದು ಅಲೆದಾಡುವ ಜನರನ್ನು ಕಾಣುತ್ತಿದ್ದ ರಾಜ್ ಕಪೂರ್ ಗೆ ತನ್ನ ಪ್ರಸ್ತಾವನೆಯನ್ನು ಯುವ ಕವಿ ಉತ್ಸಾಹ, ಋಣಭಾವದಲ್ಲಿ ಸ್ವೀಕರಿಸಬಹುದೆಂಬ ದೃಢ ವಿಶ್ವಾಸದಲ್ಲಿ, ತನ್ನ ಅಹಂಕಾರವನ್ನು ಮೆರೆಯದೆ,  ಕೋಮಲವಾದ ಸೂಕ್ಷ್ಮ ಕವಿ ಹೃದಯಕ್ಕೆ ಧಕ್ಕೆ ತರದಂತೆ ತನ್ನೆಲ್ಲ ಸೌಜನ್ಯದಿಂದ ಕೇಳುತ್ತಾನೆ.  ಸ್ವಾತಂತ್ರ ಆಂದೋಲನದಲ್ಲಿ ಮುಳುಗಿ, ದೇಶಭಕ್ತಿಯನ್ನು ಮೈಗೂಡಿಸಿಕೊಂಡಿದ್ದ ಯುವ ಕವಿ ಕ್ಷಣ ವಿಚಲಿತನಾಗಿ  ನನ್ನ ಕವಿತೆ ಮಾರಾಟಕ್ಕಿಲ್ಲಎಂದು ಖಡಾತುಂಡವಾಗಿ ತರುಣನ ಮುಖಕ್ಕೆ ಹೊಡೆದಂತೆ ಹೇಳುತ್ತಾನೆ. ಇದರಿಂದ ಸ್ವಲ್ಪವೂ ಬೇಸರಗೊಳ್ಳದ ತರುಣ, ತನ್ನ ಜೇಬಿನಿಂದ ಕಾಗದದ ತುಂಡೊಂದನ್ನು ತೆಗೆದು ಅದರಲ್ಲಿ ತನ್ನ ಹೆಸರು ವಿಳಾಸವನ್ನು ಬರೆದು ಯುವ ಕವಿಗೆ ನೀಡುತ್ತಾಮುಂದೊಂದು ದಿನ ನಿಮ್ಮ ನಿರ್ಧಾರ ಬದಲಾದರೆ, ನನ್ನನ್ನು ವಿಳಾಸದಲ್ಲಿ ಸಂಪರ್ಕಿಸಬಹುದು  ಎಂದು  ಹೇಳಿ ಹೋಗುತ್ತಾನೆ.

ಬಿಹಾರ ಮೂಲದ ಕೇಸರಿಲಾಲ್- ಪಾರ್ವತಿದೇವಿ ತಮ್ಮ ಕುಟುಂಬದೊಂದಿಗೆ ಜೀವನಕ್ಕಾಗಿ ಇಂದಿನ ಪಾಕಿಸ್ತಾನದಲ್ಲಿರುವ ರಾವಲ್ಪಿಂಡಿಗೆ ವಲಸೆ ಹೋಗುತ್ತಾರೆ. ಅಲ್ಲಿ, ಅವರಿಗೆ 1923 ಆಗಸ್ಟ್ 30 ರಂದು ಒಂದು ಗಂಡು ಮಗುವಿನ ಜನನವಾಗುತ್ತದೆ. ಮಗುವಿಗೆ ಶಂಕರ್ ದಾಸ್  ಎಂದು ನಾಮಕರಣ ಮಾಡುತ್ತಾರೆ.  ಮಗು ಬಾಲ್ಯಾವಸ್ತೆಯಲ್ಲಿರುವಾಗ ಕುಟುಂಬ ಇಂದಿನ ಮಥುರಾ ಪಟ್ಟಣಕ್ಕೆ ವಲಸೆ ಬರುತ್ತದೆ. ಶಂಕರ್ ದಾಸ್ ಇನ್ನೂ ಹದಿ ಹರೆಯದಲ್ಲಿರುವಾಗ ತನ್ನ ತಾಯಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಇನ್ನೇನು ಬದುಕುವುದೇ ಕಷ್ಟವೆಂದು ತೋರಿದಾಗ ದೇವರಲ್ಲಿ ಮೊರೆ ಇಡುತ್ತಾನೆ; ಬರಿಗಾಲಿನಲ್ಲಿ ಮಥುರಾದ ಉರಿ ಬಿಸಿಲಿನಲ್ಲಿ ಎಲ್ಲ ದೇವಸ್ಥಾನಗಳಿಗೆ ಎಡತಾಕುತ್ತಾನೆ, ಪ್ರಾರ್ಥಿಸುತ್ತಾನೆ; ಕಡೆಗೆ ತಾಯಿ ಉಳಿಯುವುದಿಲ್ಲ; ದೇವರಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಾನೆ. ಅಲ್ಲಿಂದ ಮುಂದೆ ತನ್ನ ಇಡೀ ಜೀವನದಲ್ಲಿ ದೇವರನ್ನು ನಂಬದ ನಾಸ್ತಿಕನಾಗುತ್ತಾನೆ. ಕಷ್ಟ-ಕಾರ್ಪಣ್ಯದಲ್ಲಿ, ಭಾರತೀಯ ಸಂಸ್ಕೃತಿ, ಪರಂಪರೆಯ ಪ್ರತೀಕವಾದ ಮಥುರಾದಲ್ಲಿ ಬೆಳೆದ ಹುಡುಗ, ಭಾಷೆ, ಸಂಸ್ಕೃತಿ, ಜೀವನದರ್ಶನವನ್ನೆಲ್ಲಾ ತನ್ನ ಸಣ್ಣ ವಯಸ್ಸಿನಲ್ಲಿಯೇ ಮೈಗೂಡಿಸಿಕೊಳ್ಳುತ್ತಾನೆ.  ಓದಿನ ನಡುವೆ ಆಗಾಗ ತನ್ನ ಜೀವನದ ಅನುಭವಗಳನ್ನು ಕವಿತೆಯ ರೂಪದಲ್ಲಿ ಬರೆಯಲಾರಂಭಿಸುತ್ತಾನೆ. ಅವನ ಗೆಳೆಯರು ಈತನ ಕವಿತೆಯನ್ನು ಮೆಚ್ಚುವಷ್ಟು ಪ್ರಬುದ್ಧರಾಗಿರಲಿಲ್ಲ. ಅವರೆಲ್ಲರೂ ಇವನನ್ನು ಅರ್ಥವಿಲ್ಲದ್ದನ್ನು ಗೀಚುವವನೆಂದು ಆಡಿಕೊಳ್ಳುತ್ತಿದ್ದರು. ಜೀವನ ನಿರ್ವಹಿಸುವುದು  ಕಷ್ಟವಾದ್ದರಿಂದ ಓದನ್ನು ಕೈಬಿಟ್ಟು ಭಾರತೀಯ ರೈಲ್ವೆಯಲ್ಲಿ ವೆಲ್ಡರನಾಗಿ ನೌಕರಿಗೆ ಸೇರಿ ತರಬೇತಿಗೆಂದು ಆಗ್ರಾ ಪಟ್ಟಣಕ್ಕೆ ಬರುತ್ತಾನೆ. ಅಲ್ಲಿ ತನ್ನ ತರಬೇತಿಯ ನಡುವೆ ಈತ ಬರೆಯುತ್ತಿದ್ದ ಕವಿತೆಗೆ, ಈತನ ವ್ಯಕ್ತಿತ್ವಕ್ಕೆ ಮಾರುಹೋದ ಯುವತಿಯೊಬ್ಬಳು ಇವನ ಒಡನಾಟಕ್ಕೆ ಬೀಳುತ್ತಾಳೆ; ಅವಳಲ್ಲಿ ಇವನಿಗೆ ಪ್ರೇಮಾಂಕುರವಾಗುತ್ತದೆ. ಆದರೆ, ಬಡತನದಲ್ಲಿದ್ದ ಇವನ ಕುಟುಂಬವನ್ನು ಮತ್ತು   ಇದ್ದುದರಲ್ಲಿ ಸ್ಥಿತಿವಂತರಾದ ಯುವತಿಯ ಕುಟುಂಬವನ್ನು ಬೆಸೆಯುವ ಯಾವ ಸಮಾನ ಲಕ್ಷಣಗಳು ಇರಲಿಲ್ಲ.  ನಡುವೆ ಯುವತಿಯ ಅಕ್ಕನ ಮದುವೆಯು ಒಬ್ಬ ವೈದ್ಯ ವರನೊಂದಿಗೆ ನಿಗದಿಯಾಗುತ್ತದೆ. ಸಂಧರ್ಭದಲ್ಲಿ ಶಂಕರ್ ದಾಸ್  ಸ್ವಲ್ಪ ಧೈರ್ಯಮಾಡಿ ಯುವತಿಯ ತಂದೆಯನ್ನು ಭೇಟಿಮಾಡಿ ತನ್ನ ಮತ್ತು ಅವರ ಮಗಳ ನಡುವಿನ ಪ್ರೇಮದ ವಿಷಯ ಪ್ರಸ್ತಾಪ ಮಾಡಿ ಮದುವೆ ಮಾಡಿ ಕೊಡುವಂತೆ ಕೇಳುವ ಧೈರ್ಯ ಮಾಡುತ್ತಾನೆ. ಇವನ ಪ್ರಸ್ತಾಪವನ್ನು ಕೇಳಿ ಯುವತಿಯ ಕುಟುಂಬದವರು ಹೌಹಾರುತ್ತಾರೆ. ರೈಲ್ವೆಯ ಮೆಕ್ಯಾನಿಕ್ ಗೂ ಅವರಿಗೂ ಎಲ್ಲಿಯ ಸಾಟಿ!  ಆದರೆ, ಯುವತಿಯ ತಂದೆ ಈತನ ನೇರ, ಸರಳ ವ್ಯಕ್ತಿತ್ವ, ಈತನ ಪ್ರಾಮಾಣಿಕತೆಯನ್ನು ಮೆಚ್ಚಿಕೊಳ್ಳುತ್ತಾರೆ. ನೌಕರಿ ಸಣ್ಣದಾದರೂ ಪ್ರೀತಿಸಿದ ತಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವವನೆಂದು ಅವರಿಗೆ ತೋರುತ್ತದೆ; ಅವರ ಹಿರಿಯ ಮಗಳ ಮದುವೆಯೊಂದಿಗೆ ಇವರ ಮದುವೆಯನ್ನೂ ಯುವತಿಯ ತಂದೆ ಮಾಡುತ್ತಾರೆ. ತರಬೇತಿಯ ನಂತರ ಶಂಕರ್ ದಾಸ್ ಗೆ ಬಾಂಬೆಯ ರೈಲ್ವೆ ವರ್ಕ್ ಶಾಪಿಗೆ  ಪೋಸ್ಟಿಂಗ್ ಆಗುತ್ತದೆ.  ತನ್ನ ಪ್ರೀತಿಯ ಮಡದಿಯೊಂದಿಗೆ ಬಾಂಬೆಯಲ್ಲಿ ಒಂದು ಕೊಠಡಿಯ ಹಳೆಯ ಮನೆಯೊಂದರಲ್ಲಿ ಸಂಸಾರ  ಹೂಡುತ್ತಾನೆ. ಸಾಲದ ಸಂಬಳ, ಆಕಾಶದಷ್ಟು ಆಸೆಗಳು, ಕನಸುಗಳು ಕಣ್ಣಲ್ಲೇ ಕರಗಿ ಹೋಗುತ್ತಿದ್ದವು. ಒಂದೊಂದು ದಿನ ಇರುವ ಒಂದೇ ಆಲೂ ಗೆಡ್ಡೆಯನ್ನು ಮಧ್ಯಾನದ ಊಟಕ್ಕೆ ಬಳಸುವುದೋ ಅಥವ ರಾತ್ರಿಯೂಟಕ್ಕೋ ಎನ್ನುವಷ್ಟು ಬಡತನ. ಈತನಿಗೆ ಸಂಕಟ;  ಸುಖವಾಗಿ ಬೆಳೆದಿದ್ದ ತನ್ನ ಹೆಂಡತಿಗೆ ಒಂದು ಹೊತ್ತಿನ ಊಟವನ್ನೂ ಚೆನ್ನಾಗಿ ಕೊಡಲಾಗುತ್ತಿಲ್ಲವಲ್ಲ ಎಂಬ ಕೊರಗು, ಸಂಕಟ. ಇಂಥಹ ಸ್ಥಿತಿಯಲ್ಲಿ ಹೆಂಡತಿ ಗರ್ಭಿಣಿಯಾಗುತ್ತಾಳೆ; ಅವಳ ಪುಷ್ಠಿಗೆ ಒಳ್ಳೆಯಾ ಆಹಾರ ತಂದು ಕೊಡಲು, ಅತ್ತ ತವರಿಗೆ ಕಳುಹಿಸಲೂ ಕಿಸೆಯಲ್ಲಿ ಹಣವಿಲ್ಲ.   ಸ್ಥಿತಿಯಲ್ಲಿ ತನ್ನ ಕವಿತೆಯನ್ನು ಕೊಳ್ಳಲು ಬಂದಿದ್ದ ಅಂದಿನ ಪ್ರಸಿದ್ಧ ನಟ, ಸಿನಿಮಾ ನಿರ್ಮಾತೃ ಆಗಿದ್ದ ಪೃಥ್ವಿರಾಜ್ ಕಪೂರರ ಮಗನ ನೆನಪಾಗುತ್ತದೆ. ಅಂದು ಅವನು ಕೊಟ್ಟಿದ್ದ ಕಾಗದದ ತುಣುಕನ್ನು ಹುಡುಕುತ್ತಾನೆ; ಅದರಲ್ಲಿನ ವಿಳಾಸವನ್ನು ಹುಡುಕಿ ತರುಣನನ್ನು ಭೇಟಿಮಾಡಿ ಈಗ ತನಗೆ ಹಣದ ಅವಶ್ಯಕತೆ ಇರುವುದಾಗಿಯೂ, ತುರ್ತಾಗಿ ಐದುನೂರು ರೂಪಾಯಿ ಕೊಟ್ಟರೆ ಕಂತುಗಳಲ್ಲಿ ಅದನ್ನು ಹಿಂತಿರುಗಿಸುವುದಾಗಿ ಹೇಳುತ್ತಾನೆ. ರಾಜ್ ಕಪೂರ್ ಕೂಡಲೆ ಐದುನೂರು ರೂಪಾಯಿಗಳನ್ನು ಕೊಟ್ಟು ಕಳುಹಿಸುತ್ತಾನೆ. ಒಂದು ದಿನ ಪಡೆದ ಹಣವನ್ನು ಹಿಂದಿರುಗಿಸಲು ಶಂಕರ್ ದಾಸ್, ರಾಜ್ ಕಪೂರ್ ಬಳಿ ಬಂದಾಗ ಪ್ರೀತಿಯಿಂದ ಅದನ್ನು ವಾಪಾಸು ಶಂಕರ್ ದಾಸ್ ಕಿಸೆಗಿಟ್ಟು  ಬರ್ಸಾತ್ಎಂಬ ತನ್ನದೊಂದು ಸಿನಿಮಾ ಚಿತ್ರೀಕರಣವಾಗುತ್ತಿದೆ ಅದಕ್ಕೆ ಹಾಡು ಬರೆದು ಕೊಡುವಂತೆ ರಾಜ್ ಕಪೂರ್ ಹೇಳುತ್ತಾನೆ. ಅಷ್ಟೊತ್ತಿಗೆ ಚಿತ್ರಕ್ಕೆ ಖ್ಯಾತ ಗೀತಕಾರರಾದ ಹಜರತ್ ಜಯಪುರಿಯವರಿಂದ ಆರು, ಜಲಾಲ್ ಮಲಿಹಾಬಾದಿಯವರಿಂದ ಒಂದು, ರಮೇಶ್ ಶಾಸ್ತ್ರಿಯವರಿಂದ ಒಂದು ಮತ್ತು ಶಂಕರ್ ಜೈಕಿಶನ್ ರವರಿಂದ ಒಂದು, ಒಟ್ಟು ಒಂಭತ್ತು ಹಾಡುಗಳನ್ನು ಬರೆಸಿ ಅಂದಿನ ಖ್ಯಾತ ಸಂಗೀತ ನಿರ್ದೇಶಕ ಜೋಡಿ ಶಂಕರ-ಜೈಕಿಶನರಿಂದ ಸಂಗೀತ ಸಂಯೋಜನೆ ಮಾಡಿಸಲಾಗಿರುತ್ತದೆ.  ಆದಾಗ್ಯೂ, ಶಂಕರ್ ದಾಸ್ ಪಾಂಡಿತ್ಯದಿಂದ ಅದೆಂತಹ ಹಾಡು ಹೊಮ್ಮ ಬಹುದೆಂಬ ಕುತೂಹಲಕ್ಕೆ ಮತ್ತೆರಡು ಹಾಡುಗಳನ್ನು ಬರೆಯುವಂತೆ ರಾಜ್ ಕಪೂರ್ ಹೇಳುತ್ತಾನೆ. ‘ಶೈಲೇಂದ್ರಎಂಬ ಕಾವ್ಯನಾಮದಲ್ಲಿ ಆಗ ಬರೆದದ್ದೇಬರ್ಸಾತ್ ಮೆ.. ಹಮ್ ಸೆ ಮಿಲೆ ತುಮ್”.  ಮತ್ತು  ಪತಲಿ ಕಮರ್ ಹೈ  ಎಂಬ  ಎರಡು ಹಾಡುಗಳು.  ಬರ್ಸಾತ್ ಮೆ ಹಮ್ ಸೆ ಮಿಲೆ ತುಮ್   ಹಾಡಿನ ಸರಳ ಸುಂದರ ಸಾಲುಗಳು ಪ್ರೇಮಿಗಳ ಹೃದಯದ ಮಿಡಿತವನ್ನು ಅಷ್ಟು ಗಾಢವಾಗಿ ಹಿಡಿದಿಟ್ಟಿದ್ದು ತುಂಬ ರೊಮ್ಯಾಂಟಿಕ್ ಆದ ರಾಜ್ ಕಪೂರನನ್ನು ಕ್ಷಣ ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಅಲ್ಲಿಯವರೆಗೂ ಉರ್ದು ಶಾಯರಿಯುಕ್ತ ಘಜಲ್ ಗಳಿಂದ ಪ್ರೇರಿತವಾದ ಗೀತೆಗಳನ್ನು ಕೇಳಿದ್ದ ರಾಜ್ ಕಪೂರ್ ಗೆ ಈ ಸರಳ ಸುಂದರ ಸಾಲುಗಳು ಮೋಹಕವಾಗಿ ಕಾಣುತ್ತವೆ;  ಆಗ ಶಂಕರ್ ದಾಸ್ ನನ್ನು ಅಪ್ಪಿ, ಇನ್ನು ಮುಂದೆ ತನ್ನೆಲ್ಲ ಸಿನಿಮಾಗಳಿಗೆ ನೀನು ಹಾಡುಗಳನ್ನು ಬರೆಯಬೇಕೆಂದು ಹೇಳಿ ತನ್ನ ಪ್ರೊಡಕ್ಷನ್ ಕಂಪನಿಯಲ್ಲಿ ತಿಂಗಳಿಗೆ ಐದು ನೂರು ರೂಪಾಯಿಗಳ ಸಂಬಳಕ್ಕೆ ಶಂಕರ್ ದಾಸ್ ನನ್ನು ಒಪ್ಪಿಸುತ್ತಾನೆ.  ಹಾಡು ಚಿತ್ರದ ಟೈಟಲ್ ಸಾಂಗ್ ಆಯ್ತು.  ಮುಂದೆ ಬರ್ಸಾತ್ ಸಿನಿಮಾ ಬಿಡುಗಡೆಯಾಗಿ ಅದ್ಭುತವಾದ  ಯಶಸ್ಸು ಕಂಡಿತು. ಎಲ್ಲರ ಬಾಯಲ್ಲಿ ಇದೇ ಹಾಡು; ಇಷ್ಟು ಸರಳವಾದ ಪದಗಳಲ್ಲಿ  ಭಾವಗಳನ್ನು ಮನ ಮುಟ್ಟುವಂತೆ ಬರೆದವರು ಯಾರು ಎಂದು ತಿಳಿಯಲು ಎಲ್ಲರೂ ಕಾತುರರಾಗಿದ್ದರು.  ಯಾರು ಶೈಲೇಂದ್ರ  ಎಂದು ಎಲ್ಲರೂ ಕೇಳುವಂತಾಯಿತು. ಅಲ್ಲಿಂದ ಶೈಲೇಂದ್ರ ಖ್ಯಾತಿವೆತ್ತ  ಗೀತಕಾರರಾದರು. ನಿರ್ಮಾಪಕರು ಇವರ ಬಾಗಿಲು ತಟ್ಟಲಾರಂಭಿಸಿದರು. ಶೈಲೇಂದ್ರರು ಉತ್ತುಂಗದಲ್ಲಿದ್ದಾಗ ಆನಂದ್ ಸಹೋದರರಾದ ದೇವರ ಆನಂದ್ ಮತ್ತು ವಿಜಯ್ ಆನಂದ್ ಆರ್.ಕೆ.ನಾರಾಯಣ್ ' ಗೈಡ್' ಅನ್ನು ಸಿನಿಮಾ ಮಾಡುವ ಯೋಜನೆಯಲ್ಲಿ ಅಂದಿನ ಗೀತಕಾರರಾದ  ಹಝರತ್ ಜೈಪುರಿ ಯವರನ್ನು ಗೊತ್ತುಪಡಿಸಿರುತ್ತಾರೆ; ಆದರೆ ಅವರ ಶಾಯರಿ ಶೈಲಿಯ ಗೀತೆಗಳು ತಮ್ಮ  ಗೈಡ್ ಸಿನಿಮಾಕ್ಕೆ ಹೊಂದುವುದಿಲ್ಲ ಎಂದು ಆನಂದ್ ಸಹೋದರರಿಗೆ ಅನಿಸುತ್ತದೆ. ಜನ ಸಾಮಾನ್ಯರ ಬಾಯಲ್ಲಿ ಹರಿದಾಡುವ ಸರಳ ಪದಗಳಲ್ಲಿ ಗಹನವಾದ ಜೀವನಸಾರ ಅಡಗಿರುವ ಗೀತೆಗಳು ಅವರಿಗೆ ಬೇಕಾಗಿತ್ತು. ಅಂದು ಇಂತಹ ಗೀತೆಗಳನ್ನು ಶೈಲೇಂದ್ರ ಮಾತ್ರ ಬರೆಯುತ್ತಿದ್ದರು. ಹಝರತ್ ಜೈಪುರಿಯವರ ಗೀತೆಗಳನ್ನು ಬದಿಗೊತ್ತಿ ಶೈಲೇಂದ್ರರನ್ನು ಸಂಪರ್ಕಿಸಿ ತಮ್ಮ ಗೈಡ್ ಸಿನಿಮಾಕ್ಕೆ ಗೀತೆಗಳನ್ನು ಬರೆಯುವಂತೆ ಕೇಳುತ್ತಾರೆ.  ಸೂಕ್ಷ್ಮ ಮನಸ್ಸಿನ ಸ್ವಾಭಿಮಾನಿಯಾದ ಶೈಲೇಂದ್ರರಿಗೆ ಅವರ ಪ್ರಸ್ತಾವನೆ ಮತ್ತು ಅದರ ಹಿಂದಿನ ಯೋಚನೆ ತಮ್ಮ ಗೌರವಕ್ಕೆ ಶೋಭೆ ತರುವಂಥದ್ದಲ್ಲ ಎಂದು ತೋರುತ್ತದೆ. ಅವರ ಈ ಪ್ರಸ್ತಾವನೆಯನ್ನು ಅವರಿಗೆ ನೋವಾಗದ ರೀತಿಯಲ್ಲಿ ಹೇಗೆ ನಿರಾಕರಿಸುವುದು ಎಂಬ ಗೋಜಿಗೆ ಬೀಳುತ್ತಾರೆ. ಕೊನೆಗೆ ಕಲ್ಪನೆಗೂ ಮೀರಿದ ಸಂಭಾವನೆಯನ್ನು ಕೇಳಿದರೆ ಆನಂದ್ ಸಹೋದರರು ಹಿಂದೆ ಸರಿಯಬಹುದು ಎಂಬ ಲೆಕ್ಕಾಚಾರದಲ್ಲಿ ಅರವತ್ತರ ದಶಕದಲ್ಲಿ ಕಂಡು ಕೇಳಿರದ ಸಂಭಾವನೆಯನ್ನು ಕೇಳುತ್ತಾರೆ! ಅಂದಿನ ದಿನಗಳಲ್ಲಿ ಚಿತ್ರದಲ್ಲಿನ ಹಾಡುಗಳೇ ಚಿತ್ರವನ್ನು ಯಶಸ್ಸಿಗೆ ಒಯ್ಯುತ್ತಿದ್ದವು; ಒಂದೊಂದು ಚಿತ್ರದಲ್ಲಿ ಎಂಟರಿಂದ ಹತ್ತು ಹಾಡುಗಳಿರುತ್ತಿದ್ದವು. ಆನಂದ್ ಸಹೋದರರು ಒಮ್ಮೆ ಯೋಚಿಸಿ ತಮ್ಮ ದೊಡ್ಡ ಬಜೆಟ್ಟಿನ ಚಿತ್ರಕ್ಕೆ ಅಷ್ಟು ಹಣವನ್ನು ಚಿತ್ರದ ಗೀತೆಗಳಿಗೆ ವ್ಯಯಿಸುವುದು ಹೆಚ್ಚಾಗಲಾರದೆಂದು ಎಣಿಸಿ ಶೈಲೇಂದ್ರರು ಸೂಚಿಸಿದ ಸಂಭಾವನನೆಯನ್ನು ಒಪ್ಪಿಕೊಳ್ಳುತ್ತಾರೆ. ಅಂದು ಶೈಲೇಂದ್ರರು ಕೇಳಿದ ಸಂಭಾವನೆಯನ್ನು ಇಂದಿನ ಮೌಲ್ಯಕ್ಕೆ ಪರಿವರ್ತಿಸಿದರೆ ಇಂದಿನ ಯಾವ ಖ್ಯಾತ ಗೀತಕಾರರೂ ಅಷ್ಟೊಂದು ಸಂಭಾವನೆ ಕೇಳುವ ಮನಸ್ಸು ಮಾಡುವುದಿರಲಿ, ಕನಸ್ಸಿನಲ್ಲಿಯೂ ಎಣಿಸಲಾರರು; ಅಂದು ಪ್ರತಿ ಗೀತೆಗೆ ಅವರು ಕೇಳಿದ ಸಂಭಾವನೆ ಹತ್ತು ಸಾವಿರ ರೂಪಾಯಿಗಳು!. ಮುಂದೆ ಅದೇ ಶೈಲೇಂದ್ರರ ಸಂಭಾವನೆಯ ಮಾನದಂಡವಾಯಿತು; ಆದರೆ ತನ್ನ ಬದುಕಿಗೆ ತಿರುವು ಕೊಟ್ಟ ರಾಜ್ ಕಪೂರರ ಚಿತ್ರಗಳಿಗೆ ಮಾತ್ರ ಶೈಲೇಂದ್ರರು ಕೇವಲ ಐದು ನೂರು ರೂಪಾಯಿಗಳ ಮಾಸಿಕ ಸಂಬಳ ಪಡೆಯುತ್ತಿದ್ದರು. ಅಲ್ಲಿಂದ ಮುಂದೆ ಎಲ್ಲ ಖ್ಯಾತ ಬ್ಯಾನರ್ ಗಳ ಚಿತ್ರಗಳಲ್ಲಿ ಶೈಲೇಂದ್ರರ ಗೀತೆಗಳಿರುತ್ತಿದ್ದವು. ಅವರಿಗೆ ಚಿತ್ರರಂಗದಲ್ಲಿ ತಾರೆಯ ಪಟ್ಟ ದೊರೆತಿತ್ತು. ಅವರ ಊಹೆಗೆ ಮೀರಿ ಹಣ, ಖ್ಯಾತಿ ಅವರನ್ನು ಅರಸಿ ಬಂತು. ಮುಂಬೈನಲ್ಲಿ ಬಂಗಲೆಯನ್ನು ಖರೀದಿಸಿ ಅದಕ್ಕೆ’ರಿಮ್ ಜಿಮ್’ ಎಂದು ಹೆಸರಿಡುತ್ತಾರೆ; ಮನೆಯ ತುಂಬ ಆಳು ಕಾಳು, ಮಕ್ಕಳಿಗೆಲ್ಲ ಯುರೋಪಿಯನ್ ಶಿಕ್ಷಣ; ಅವರ ಮನೆಯ ವೈಭವ ಮುಂಬೈನ ಯಾವ ಸಿನಿಮಾ ತಾರೆಯ ಮನೆಗೂ ಕಡಿಮೆ ಇರಲಿಲ್ಲ. ಅವರ ಮಗಳು ಅಮಲಾ ಮಜುಮ್ದಾರ್ ಹೇಳುವಂತೆ ಐಶ್ವರ್ಯ ಮತ್ತು ಖ್ಯಾತಿ ಅವರನ್ನು ಎಂದೂ ಬದಲಾಯಿಸಲಿಲ್ಲ. ಒಮ್ಮೆ ಅಮಲಾ ತನ್ನ ಬಾಲ್ಯದಲ್ಲಿ ಶಾಲೆಯಿಂದ ಮನೆಗೆ ಬರುವಾಗ ತನ್ನ ಪುಸ್ತಕಗಳನ್ನು ಮನೆಯ ಸೇವಕ ಹೊತ್ತು ತರುವಂತೆ ಮಾಡಿದ್ದಕ್ಕೆ ಆಕ್ಷೇಪಿಸಿ ಮುಂದೆ ಹಾಗೆ ಮಾಡದಂತೆ ತಾಕೀತು ಮಾಡಿದ್ದರಂತೆ.   
ಒಮ್ಮೆ ರಾಜ್ ಕಪೂರ್ ಶೈಲೇಂದ್ರರನ್ನು ಒಂದು ಕಥೆಯನ್ನು ಕೇಳುವ ಸಲುವಾಗಿ ಕೆ.ಎ.ಅಬ್ಬಾಸ್ ರವರ ಬಳಿ ಕರೆದುಕೊಂಡು ಹೋಗುತ್ತಾರೆ. ಈತ ಯಾರೊ ಹೊಸಬ ಎಂದು ಅಬ್ಬಾಸ್ ಶೈಲೇಂದ್ರರನ್ನು ಕಡೆಗಣಿಸಿ ರಾಜ್ ಕಪೂರ್ ಗೆ ಎರಡೂವರೆ ಗಂಟೆಗಳ ವರೆಗೆ ಕಥೆ ಹೇಳುತ್ತಾ ಹೋಗುತ್ತಾರೆ; ಕೊನೆಯಲ್ಲಿ ರಾಜ್ ಕಪೂರ್ ಏನಾದ್ರೂ ಅರ್ಥ ಆಯ್ತಾ ಎಂದು ಶೈಲೇಂದ್ರರನ್ನು ಕೇಳುತ್ತಾರೆ; ಅದಕ್ಕೆ ಶೈಲೇಂದ್ರರು ಹೌದು, “ಅಲೆಮಾರಿಯಂತೆ ತಿರುಗುವ ಹುಚ್ಚನಾಗಿದ್ದ, ಆದ್ರೆ ಆಕಾಶದ ತಾರೆಯಾಗಿದ್ದ…” (ಗರ್ದಿಷ್ ಮೆ ಥಾ, ಪರ್ ಆಸ್ಮಾನ್ ಕಾ ತಾರಾ ತಾ, ಅವಾರಾ ಥಾ…) ಇದನ್ನು ಕೇಳಿ ಅಬ್ಬಾಸ್ ಅವಾಕ್ಕಾದರು!  ತನ್ನ ಎರಡೂವರೆ ಗಂಟೆಗಳ ಕಥೆಯನ್ನು ಒಂದು ಸಾಲಿನಲ್ಲಿ ಹೇಳಿದ ಈತ ಯಾರು ಎಂದು ಅವರಿಗೆ ಅಚ್ಚರಿಯಾಯಿತು. ಮುಂದೆ ಆ ಚಿತ್ರಕ್ಕೇ ಶೈಲೇಂದ್ರರು ಇದೇ ಸಾಲನ್ನು ಮುಂದುವರಿಸಿ “ ಯಾ ಗರ್ದಿಷ್ ಮೆ ಹ್ಞೂಂ, ಆಸ್ ಮಾನ್ ಕಾ ತಾರಾ ಹ್ಞೂಂ, ಆ್ಞವಾರಾ.. ಹ್ಞೂಂ..” ಎಂಬ ಪ್ರಸಿದ್ದವಾದ ಹಾಡನ್ನು ‘ಆ್ಞವಾರಾ’ ಚಿತ್ರಕ್ಕೆ ಬರೆದರು.   ಈ ಮೂವರು, ಮುಂದೆ ಶಂಕರ್-ಜೈಕಿಶನ್ ಜೊಡಿಯ ಜೊತೆ ಸೇರಿ ಹಿಂದಿ ಚಿತ್ರರಂಗದ ದಾಖಲೆಯ ಚಿತ್ರಗಳನ್ನು ನಿರ್ಮಿಸಿದರು. ಬರ್ಸಾತ್ ಮತ್ತು ಆ್ಞವಾರಾ ಚಿತ್ರಗಳನಂತರ ಶೈಲೇಂದ್ರ ಬಹು ಬೇಡಿಕೆಯ ಗೀತಕಾರರಾದರು; ಇತರೆ
 ಈ ನಡುವೆ ಒಂದು ಶ್ರೇಷ್ಠ ಚಿತ್ರ ನಿರ್ಮಿಸುವ ಯೋಚನೆ ಮಾಡುತ್ತಾರೆ; ಆಗ ಅವರ ಕಣ್ಣಿಗೆ ಫಾಣೀಶ್ವರ್ ನಾಥರ ‘ಮಾರೆ ಗಯೆ ಗುಲ್ಫಂ’ ಕೃತಿ ಬೀಳುತ್ತದೆ. ಅದೊಂದು ಊರಿಂದೂರಿಗೆ ಹೋಗಿ ನಾಟಕ, ನೃತ್ಯ ಮಾಡುವ ಹೆಣ್ಣುಮಕ್ಕಳು ಎದುರಿಸುವ ಶೋಷಣೆ, ಪಡುವ ಪಾಡು, ಅನುಭವಿಸುವ ಕಷ್ಟ-ಕೋಟಲೆಗಳ ಅನಾವರಣ ಮಾಡುವ ಕಥೆ. ಅದಕ್ಕೆ ‘ತೀಸ್ರೀ ಕಸಮ್’ ಎಂದು ಹೆಸರಿಟ್ಟು,  ಚಿತ್ರಕಥೆಯನ್ನು ಬಿಮಲ್ ರಾಯ್ ರ ದೇವದಾಸ್, ಸುಜಾತಾ ಮತ್ತು ಬಂದಿನಿ ಚಿತ್ರಗಳಿಗೆ ಚಿತ್ರ ಕಥೆಯನ್ನು ಬರೆದ ನಬೆಂದು ಘೋಷ್ ರ ಕೈಯ್ಯಲ್ಲಿ ಬರೆಸುತ್ತಾರೆ;  ಸಂಭಾಷಣೆಯನ್ನು ಮೂಲ ಲೇಖಕರಾದ ಫಾಣೀಶ್ವರ್ ನಾಥರಿಂದಲೇ ಬರೆಸುತ್ತಾರೆ; ನಿರ್ದೇಶನಕ್ಕೆ  ಬಿಮಲ್ ರಾಯ್ ರ ಸಹಾಯಕ ನಿರ್ದೇಶಕ ಬಸು ಭಟ್ಟಾಚಾರ್ಯರನ್ನು ಕರೆತರುತ್ತಾರೆ. ಮುಖ್ಯಪಾತ್ರದಲ್ಲಿ ತನ್ನ ಮಿತ್ರ ರಾಜ್ ಕಪೂರ್ ಮತ್ತು ಆತನಿಗೆ ನಾಯಕಿಯಾಗಿ ವಹೀದಾ ರಹಮಾನ್ ನಟಿಸುತ್ತಾರೆ. ಶೈಲೇಂದ್ರ ಈ ಚಿತ್ರ  ನಿರ್ಮಾಣಕ್ಕೆ ತನ್ನ ತನು, ಮನ, ಧನವನ್ನೆಲ್ಲ ಅರ್ಪಿಸುತ್ತಾರೆ. ‘ತೀಸ್ರೀ ಕಸಮ್ ನ ಚಿತ್ರ ನಿರ್ಮಾಣ ಸರಾಗವಾಗಿ ಸಾಗುವುದಿಲ್ಲ; ಸಹಜವಾಗಿ ಬರಬೇಕೆಂಬ ಉದ್ದೇಶದಿಂದ ಚಿತ್ರೀಕರಣದ ಲೊಕೇಶನ್ ಮುಂಬೈನ ಸ್ಟುಡಿಯೊಗಳಿಂದ ಮಧ್ಯಪ್ರದೇಶದ ಬಿನಾ ಎಂಬ ಊರಿಗೆ ಸ್ಥಳಾಂತರಗೊಳ್ಳುತ್ತದೆ;

ದೂರ ದೂರಿನ ಚಿತ್ರೀಕರಣವಾದ್ದರಿಂದ ಎಲ್ಲ ಅಸ್ತ-ವ್ಯಸ್ತವಾಗುತ್ತದೆ; ಏರಿದ ಬಜೆಟ್, ಸಮಯಕ್ಕೆ ಸರಿಯಾಗಿ ಸಿಗದ ರಾಜ್ ಕಪೂರರ ಡೇಟ್ಸ್; ಇವೆಲ್ಲದರ ನಡುವೆ ಆಗಾಗ್ಗೆ ಮುಂದೂಡಲ್ಪಡುವ ಚಿತ್ರೀಕರಣ
ಐದು ಧೀರ್ಘ ವರ್ಷಗಳ ಕಾಲ ಹಿಡಿಯುತ್ತದೆ. ಈ ನಡುವೆ ನಿಜವಾದ ಮಿತ್ರರಾರು ಎಂಬುದು ಶೈಲೇಂದ್ರರಿಗೆ ತಿಳಿಯುತ್ತದೆ. ರಾಜ್ ಕಪೂರ್ ಮತ್ತು ಮುಕೇಶ್ ಹೊರತಾಗಿ ಎಲ್ಲ ಸ್ನೇಹಿತರು ಅವರನ್ನು ಕೈಬಿಡುತ್ತಾರೆ; ಶೈಲೇಂದ್ರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಅಂತೂ ತೀಸ್ರೀ ಕಸಮ್ ಚಿತ್ರ ಬಿಡುಗಡೆಯಾಗಿ ಯಶಸ್ಸು ಕಾಣದೆ ನೆಲ ಕಚ್ಚುತ್ತದೆ. ಚಿತ್ರದ ಸೋಲನ್ನು ಜೀರ್ಣಿಸಿಕೊಳ್ಳಲಾಗದೆ ಶೈಲೇಂದ್ರರ ಆರೋಗ್ಯ ಕೆಡುತ್ತದೆ; 1966 ರ ಡಿಸೆಂಬರ್ 13 ರಂದು ತೀವ್ರ ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಹೇಳುತ್ತಾರೆ; ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ತನ್ನ ಮಿತ್ರನಾದ ರಾಜ್ ಕಪೂರನ ಕುಟೀರ ಬರುತ್ತದೆ; ಮಿತ್ರನನ್ನು ಮಾತಾಡಿಸಿ ಹೋಗಬೇಕೆನಿಸುತ್ತದೆ; ಒಳಗೆ ಹೋಗಿ ಮಿತ್ರನೊಡನೆ ಮಾತನಾಡಿ ಅಪೂರ್ಣವಾಗಿದ್ದ ಮೆರಾ ನಾಮ್ ಜೋಕರ್ ಸಿನಿಮಾದ “ ಜೀನಾ ಯಹಾ, ಮರ್ನಾ ಯಹಾ…” ಹಾಡನ್ನು ಆಸ್ಪತ್ರೆಯಿಂದ ಹಿಂತಿರುಗಿ ಬಂದ ಮೇಲೆ ಪೂರ್ಣಗೊಳಿಸುವುದಾಗಿ ಹೇಳಿ ಹೊರಟ 43 ವರ್ಷದ ಶೈಲೇಂದ್ರ ಮತ್ತೆ ಮರಳಲೇ ಇಲ್ಲ;

 ಮರುದಿನ ಡಿಸೆಂಬರ್ 14, ತನ್ನ ಆಪ್ತಮಿತ್ರ ರಾಜ್ ಕಪೂರನ ಜನ್ಮದಿನದಂದು ಭಾರತೀಯ ಚಿತ್ರರಂಗ ಕಂಡ ಅಭೂತಪೂರ್ವ ಕವಿ, ಗೀತಕಾರ ಚೇತನ ಈ ಲೋಕ ಬಿಟ್ಟು ತೆರಳಿತು; ತೀಸ್ರೀ ಕಸಮ್ ಚಿತ್ರ ಶೈಲೇಂದ್ರರ ಜೀವವನ್ನೇ ತಿಂದಿತು.

ಮುಂದೆ ‘ತೀಸ್ರೀ ಕಸಮ್’ ಚಿತ್ರ ಕ್ರಮೇಣ ಜನ ಮನ್ನಣೆಯನ್ನು ಗಳಿಸಿ ರಾಷ್ಟ್ರಪತಿಗಳಿಂದ ಸ್ವರ್ಣ ಕಮಲ ಪ್ರಶಸ್ತಿಗಳಿಸುತ್ತದೆ. ಇಂದಿಗೂ ‘ತೀಸ್ರೀ ಕಸಮ್’ ಸರ್ವೋತ್ತಮ ಭಾರತೀಯ ಚಿತ್ರಗಳಲ್ಲಿ ಒಂದಾಗಿದೆ.

 ಶೈಲೇಂದ್ರರು ಬರೆದ ಹಾಡುಗಳು ಇಂದಿಗೂ ಜನರ ಮನದಲ್ಲಿವೆ. 'ಆವಾರಾ' ಸಿನಿಮಾದ "ಆವಾರಾ ಹ್ಞೂಂ...", ಬರ್ಸಾತ್ ಸಿನಿಮಾದ " ಬರ್ಸಾತ್ ಮೆ ಹಮ್ ಸೆ ಮಿಲೆ..., ಶ್ರೀ 420 ಸಿನಿಮಾದ " ಪ್ಯಾರ್ ಹುವಾ ಇಕರಾರ್ ಹುವಾ..", " ರಾಮಯ್ಯ ವಸ್ತಾವಯ್ಯ ", "ಮುಡ್ ಮುಡ್ ಕೆ ದೇಖ್ ಮುಡ್ ಮುಡ್ ಕೆ..", ಮೇರಾ ಜೂತಾ ಹೆ ಜಪಾನಿ..; ಗೈಡ್ ಸಿನಿಮಾದ "ಆಜ್ ಫಿರ್ ಜೀನೇ ಕಿ ತಮನ್ನಾಹೆ.." , " ಗಾತಾ ರಹೇ ಮೆರಾ ದಿಲ್ ..." , " ಪಿಯಾ ತು ಸೆ ನೈನಾ ಲಾಗೆ ರೇ..." , ಸಂಗಮ್ ಸಿನಿಮಾದ " ದೋಸ್ತ್  ದೋಸ್ತ್ ರಹಾ.";  

ದಿಲ್ ಅಪನಾ ಔರ್ ಪ್ರೀತ್ ಪರಾಯೆ ಸಿನಿಮಾದ " ಅಜೀಬ್ ದಾಸ್ತಾನ್ ಹೈ ಕಹಾ ಶುರು ಕಹಾ ಖತಮ್... " , ತೀಸ್ರಿ ಕಸಂ ಸಿನಿಮಾದ "ಸಜನೆ ರೇ ಜೂಟ್ ಮತ್ ಬೋಲೊ..." , " ಪಾನ್ ಖಾಯೆ ಸಯ್ಯಾ ಹಮಾರೊ..."  

ಆದರೆ ಈ ಗೀತೆಗಳನ್ನೆಲ್ಲ ಶೈಲೇಂದ್ರರು ಬರೆದದ್ದು ಎಂಬುದು ಮಾತ್ರ ಮಾಸಿ ಹೋಗಿದೆ. 

ಸಜನೆ ರೇ ಜೂಟ್ ಮತ್ ಬೋಲೊ,
ಖುದಾ ಕೆ ಪಾಸ್ ಜಾನಾ ಹೆ
ನ ಹಾಥಿ ಹೆ, ನ ಗೋಡಾ ಗೆ, 
ವಹಾ ಪೈಗಲ್ ಹೀ ಜಾನಾ ಹೇ...

ಛೋಟಿ ಸಿ ಹೆ ದುನಿಯಾ,
ಪೆಹೆಚಾನೆ ರಾಸ್ತೆ ಹೆ, ಕಭೀತೊ ಮಿಲೋಗೆ,
ಕಹೀತೊ ಮಿಲೋಗೆ,
ತೊ ಪೂಚೆಂಗೆ ಹಾಲ್….

ಎಂದು ಹಾಡಿದ ಕೋಗಿಲೆ ಅಮರವಾಗಲಿ.

Wednesday, December 10, 2014

ಮೌಢ್ಯವೇ ಧರ್ಮವಾದಾಗ


ನೇಪಾಳದ ಕಠ್ಮಂಡುವಿನಿಂದ ನೂರು ಮೈಲಿ ದಕ್ಷಿಣಕ್ಕಿರುವ ಬಾರಾ ಜಿಲ್ಲೆಯ ಬರಿಯಾರಪುರದ ಗಧಿಮಾಯಿ ದೇವಳದಲ್ಲಿ  ಐದು ವರ್ಷಗಳಿಗೊಮ್ಮೆ ನಡೆಯುವ ಗಧಿಮಾಯಿ ಪರ್ಬ(ಹಬ್ಬ)ದಲ್ಲಿ ಸುಮಾರು ಐದು ಲಕ್ಷ ಪ್ರಾಣಿಗಳನ್ನು ಬಲಿಕೊಡಲಾಗುತ್ತದೆ. ಅವುಗಳಲ್ಲಿ ಮುಖ್ಯವಾಗಿ ಎಮ್ಮೆ, ಹಂದಿ, ಮೇಕೆ, ಕುರಿ ಕೋಳಿ ಮತ್ತು ಬಿಳಿ ಇಲಿಗಳನ್ನು ಬರ್ಬರವಾಗಿ ವಧಿಸಲಾಗುತ್ತದೆ. ಭಯಾನಕ ವಧೆಯ ದೃಷ್ಯಗಳು ನೋಡುವವರ ಎದೆಯನ್ನು ಒಮ್ಮೆ ಝಲ್ಲೆಂದು ನಡುಗಿಸುತ್ತವೆ. ಪ್ರಮಾಣದ, ಇಷ್ಟು ಘೋರವಾದ ಪ್ರಾಣಿಗಳ ಮಾರಣಹೋಮ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲವೆಂದೇ ಹೇಳಬೇಕು.
ದೇವರ ಕೃಪೆಗಾಗಿ ನಡೆಯುವ ಬಲಿಯ ಆಚರಣೆ ವೇದಗಳ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ಹೇಳಲಾಗುತ್ತದೆ. ವೇದಗಳ ಕಾಲದಲ್ಲಿ ಚಾಲ್ತಿಯಲ್ಲಿತ್ತು ಎಂದು ಹೇಳಲಾಗುವ ಪುರುಷಮೇಧ, ಅಶ್ವಮೇಧ ಇವುಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಒಂದೆಡೆ ಅವು ಸಾಂಕೇತಿಕವಾಗಿದ್ದವು ಎಂದು ಹೇಳಲಾಗುತ್ತದೆ; ಮತ್ತೊಂದೆಡೆ ಅವುಗಳು ಸಾಂಕೇತಿಕವಾಗುವ ಮೊದಲು ಆಚರಣೆಯಲ್ಲಿದ್ದವು; ಕ್ರಮೇಣ ಅವು ವಿಚಾರ ಮಂಥನಕ್ಕೆ ಸಿಕ್ಕು ಕಾಲಾನಂತರದಲ್ಲಿ ಸಾಂಕೇತಿಕವಾಗಿ ಬದಲಾವಣೆ ಹೊಂದಿದವು ಎಂದು ಹೇಳಲಾಗುತ್ತದೆ. ಇಷ್ಟು ವಿವರಗಳನ್ನು ಇಂದು ನಾವು ಮಂಥನಕ್ಕೆ ಒಡ್ಡಿದರೆ  ವೈಚಾರಿಕ ಪ್ರಜ್ಞೆ, ಅದು ಪುರೋಹಿತ ವರ್ಗದಲ್ಲಿ ತಂದ ಬದಲಾವಣೆಯು ಸಮಾಜದ ಕೆಳ ಸ್ತರಗಳಿಗೆ ಏಕೆ ಇಳಿಯಲಿಲ್ಲ ಎಂಬ ಪ್ರಶ್ನೆ ಏಳುತ್ತದೆ. ಬಹುಶಃ ಅಂದು ಅದು ಕೆಳಗಿನ ಸ್ತರಗಳಿಗೆ ಇಳಿದಿದ್ದರೆ ಇಂದು ಶೂದ್ರರು ಮಾರಮ್ಮನಿಗೆ ಕುರಿ, ಕೋಳಿ, ಕೋಣಗಳ ಬಲಿಯನ್ನು ಕೊಡುತ್ತಿರಲಿಲ್ಲವೇನೋ.. ತಮ್ಮನ್ನು ಬದಲಾವಣೆಗೆ ಒಡ್ಡಿಕೊಂಡ ಪುರೋಹಿತ ವರ್ಗವು ತಮ್ಮ   ಸೇವೆಯಲ್ಲಿದ್ದ ಶೂದ್ರರಲ್ಲಿ ಅರಿವನ್ನು ಮೂಡಿಸದಿರುವ ಅನಿವಾರ್ಯತೆಯನ್ನು ಕಾರ್ಲ್ ಮಾರ್ಕ್ಸ್ ಬಂಡವಾಳ ಮತ್ತು ಶ್ರಮದ ಹಾಗೂ ಶೋಷಕರು ಮತ್ತು  ಶೋಷಿತರ ನಡುವಿನ ಸಂಬಂಧದ ಪರಿಭಾಷೆಯಲ್ಲಿ ಅರಿಯಬಹುದು. ಶೋಷಕರ ಸೇವೆಯೇ ತಮ್ಮ ಜೀವನ ಕ್ರಮ, ತಾವು ಅನುಭವಿಸುವ ತಾರತಮ್ಯವೇ ತಮ್ಮ ಪ್ರಾರಬ್ಧ ಎಂಬ ಮನಸ್ಥಿತಿಗೆ ತಳ್ಳಲ್ಪಟ್ಟ ಶೂದ್ರರು ಯಾವುದೆ ಮೇಲರಿಮೆ ಅಥವ ಕೀಳರಿಮೆಯಲ್ಲಿ ಸಿಲುಕದೆ, ಹುಲಿಯ ಆಕ್ರಮಣಕ್ಕೆ ಒಳಗಾಗುವುದೇ ತನ್ನ ಧರ್ಮವೆಂದು ಅರಿತ ಪುಣ್ಯಕೋಟಿ ಗೋವಿನಂತಿದ್ದರು.   ಇಂಥಹ ಮನಸ್ಥಿತಿಯಲ್ಲಿ ತಮ್ಮ ಸೇವೆಯಲ್ಲಿ ತೊಡಗಿರುವ ಶೂದ್ರರಿಗೆ ವಿವೇಕವನ್ನು ತುಂಬುವುದು, ಅವರ ಆಚರಣೆಗಳನ್ನು ಸುಧಾರಿಸುವುದು, ತನ್ಮೂಲಕ ಬದಲಾವಣೆಯ ಬೀಜವನ್ನು ಬಿತ್ತುವುದು ಪುರೋಹಿತ ವರ್ಗಕ್ಕೆ ತಾವು ನಿಂತ ನೆಲವನ್ನೇ ಅಗೆಯುವಂಥ ಸ್ಥಿತಿಯಾಗಿತ್ತುಅರಿವಿನ ಸೆಲೆಗೆ ಸಿಕ್ಕ ಶೂದ್ರರು ಜ್ಞಾನೋದಯದಿಂದ ತಮ್ಮ ಸೇವೆಯನ್ನು ತ್ಯಜಿಸಿಯಾರೆಂಬ ಆತಂಕದ ಭೀತಿಗೆ ಸಿಕ್ಕ ಪುರೋಹಿತ ವರ್ಗ ಅವರನ್ನು ಇರುವಂತೆಯೇ ಬಿಟ್ಟು ಸ್ವಹಿತಕ್ಕಾಗಿ ತನ್ನಷ್ಟಕ್ಕೆ ತಾನು ಮುನ್ನಡೆಯಿತು. ಇಂದು ಬಹುತೇಕ ಶೂದ್ರರೇ ದೇವರನ್ನು ಒಲಿಸಿಕೊಳ್ಳಲು, ದೇವರ ಕೃಪೆಗೆ ಪಾತ್ರರಾಗಲು ಕುರಿ, ಕೋಳಿ, ಕೋಣಗಳನ್ನು ಬಲಿಕೊಡುವ ಆಚರಣೆಯಲ್ಲಿದ್ದಾರೆ. ದೇವರ ಕೃಪೆಯನ್ನು ದಯಪಾಲಿಸುವ ಕಾಯಕವೆಂದು  ಮನಸ್ಸಿನಲ್ಲಿ ಬೇರೂರಿರುವುದರಿಂದ ಶೂದ್ರರೂ ಆಚರಣೆಗಳನ್ನು ಬಿಟ್ಟುಕೊಡಲು ಸಿದ್ಧರಿಲ್ಲ.
ಸ್ವತಂತ್ರ ಭಾರತದ  ಸಮಾಜದಲ್ಲಿ ಆರ್ಥಿಕ ಸಮೀಕರಣಗಳು ಬದಲಾಗಿವೆ. ಸೇವೆಗಳೆಲ್ಲ ಸಾಮಾಜಿಕ ಸ್ತರಗಳ ಆವರಣಗಳನ್ನು  ದಾಟಿ ಮಾರುಕಟ್ಟೆ-ಅರ್ಥವ್ಯವಸ್ಥೆಯ  ಮಾರುಕಟ್ಟೆಗೆ ಬಂದು ನಿಂತಿವೆ. ಸಾಮಾಜಿಕ ಸ್ಥಾನಮಾನಗಳನ್ನು ಮೀರಿ  ಆರ್ಥಿಕ ಸ್ಥಾನಮಾನಗಳು ಸೇವೆಗಳ ಹರಿವನ್ನು ನಿರ್ಧರಿಸುತ್ತಿವೆ. ಸ್ಥಿತಿವಂತ ಶೂದ್ರರು, ದಲಿತರು ಪುರೋಹಿತ ಮತ್ತು ಮೇಲು ವರ್ಗವೆಂದು ಕರೆಯಿಸಿಕೊಳ್ಳುವವರ ಸೇವೆಯನ್ನೂ ಪಡೆಯುವಂತಾಗಿದ್ದಾರೆಇನ್ನು ಪುರೋಹಿತ ವರ್ಗವು ಆರ್ಥಿಕವಾಗಿ ಸಬಲರಾಗುವ ಅನ್ಯ ಮಾರ್ಗಗಳನ್ನು ಶೋಧಿಸಿ ಅವುಗಳಲ್ಲಿ ತೊಡಗಿಸಿಕೊಳ್ಳುತ್ತಿದೆ. ಒಂದು ಕಾಲದಲ್ಲಿ ಮಾದಿಗರು, ಸಮಗಾರರು ತೊಡಗಿದ್ದ ಪಾದರಕ್ಷೆಗಳ ಉದ್ಯೋಗದಲ್ಲಿ ಈಗ  ಮೇಲು ವರ್ಗದವರು ತೊಡಗಿಕೊಂಡಿದ್ದಾರೆ. ನ್ಯೂಜಿಲ್ಯಾಂಡಿನಲ್ಲಿ ಕಮ್ಯೂನಿಕೇಷನ್ ಪದವಿ ಪಡೆದ ಶಶಾಂಕ್ ಭಾರಧ್ವಾಜ್ ಎಂಬುವವರು ಬೆಂಗಳೂರಿನ ಜಯನಗರದಲ್ಲಿ  ಹಳೆಯ  ಶೂಗಳನ್ನು ರಿಪೇರಿಮಾಡಿ ಸ್ವಚ್ಛಗೊಳಿಸುವ ಶೂ-ಲಾಂಡ್ರಿಯನ್ನು ತೆರೆದಿದ್ದಾರೆ. ಇನ್ನು, ವ್ಯವಹಾರ, ಶಿಕ್ಷಣ, ಉನ್ನತ ಉದ್ಯೋಗದಲ್ಲಿ ತೊಡಗಿ  ಆರ್ಥಿಕವಾಗಿ ಸಬಲರಾದ ದಲಿತರ ಮನೆಗಳಲ್ಲಿ ಹೊಸ ಧಾರ್ಮಿಕ ಆಚರಣೆಗಳು ಹುಟ್ಟಿಕೊಂಡಿವೆಉಳಿದಂತೆ ಪೌರೋಹಿತ್ಯವನ್ನೇ ಜೀವನಕ್ಕಾಗಿ ಅವಲಂಬಿಸಿರುವ ಜನರು ತಮ್ಮ ವೃತ್ತಿಯನ್ನು ವೃದ್ಧಿಸುವ ಅದನ್ನು ಆರ್ಥಿಕವಾಗಿ ಸದೃಢವಾದ ವೃತ್ತಿಯನ್ನಾಗಿ ರೂಪಿಸುವ, ಪೋಷಿಸುವ ಹಾಗೂ ಬೆಳೆಸುವಲ್ಲಿ ನಿರತರಾಗಿದ್ದಾರೆಇದರ ಪರಿಣಾಮವಾಗಿ ಬರೀ ಕುರಿ, ಕೋಳಿ, ಕೋಣಗಳನ್ನು ಕಡಿದು ಮಾರಮ್ಮನ ಹಬ್ಬ ಮಾಡುತ್ತಿದ್ದ ದಲಿತರ ಮನೆಗಳಲ್ಲಿ ಹೋಮ ಹವನ, ಸತ್ಯನಾರಾಯಣ ವೃತ, ಪೂಜೆ ಇತ್ಯಾದಿ ಆರಂಭವಾಗಿ ಸೋಮವಾರ, ಗುರುವಾರ ಮಾಂಸ ಸೇವನೆ ವರ್ಜ್ಯಮಾಡಬೇಕೆಂಬ ಹೊಸ ನಂಬಿಕೆಗಳು ಹುಟ್ಟುತ್ತಿವೆ.  ದ್ವೈತ, ಅದ್ವೈತ ತತ್ವಗಳ ನಡುವಿನ ತೀವ್ರ ತಾತ್ವಿಕ ಭಿನ್ನಾಭಿಪ್ರಾಯ ಅದರ ಗಂಧ ಗಾಳಿ ಅರಿಯದೆ ತಮ್ಮಷ್ಟಕ್ಕೆ ತಾವು ಇದ್ದ ಶೂದ್ರರು ತಮಗರಿವಿಲ್ಲದಂತೆಯೇ ತಮ್ಮ ಮೇಲೆ ಆದ ಪ್ರಭಾವದಿಂದ ದ್ವೈತ ಮಠಗಳ ಭಕ್ತರಾಗುತ್ತಿದ್ದಾರೆ. ಇದೊಂಥರ ಆಂತರಿಕ ಮತಾಂತರವೆಂದೇ ಹೇಳಬಹುದು; ಹೇಗೆಂದರೆ ಇಲ್ಲಿಯವರೆಗೆ ದ್ವೈತ ತತ್ವಪಾಲಿಸಿಕೊಂಡು ಬಂದವರು, ಅದ್ವೈತ ಸಿದ್ಧಾಂತ ಪಾಲಿಸಲು ಮುಂದಾದರೆ ಅದನ್ನು ಆಂತರಿಕ ಮತಾಂತರವೆಂದು ತಾನೆ ಹೇಳುವುದು.  

ದ್ವೈತ, ಅದ್ವೈತ ಯಾವುದರ ಗೊಡವೆಗೆ ಹೋಗದೆ ತಮ್ಮಷ್ಟಕ್ಕೆ ತಮ್ಮದೇ ದೇವರು, ಆಚರಣೆ, ನಂಬಿಕೆಗಳಲ್ಲಿ ತೊಡಗಿದ್ದ  ಶೂದ್ರರು ಏಕಾ ಏಕಿ  ದ್ವೈತ ಮಠಗಳಿಗೆ ಅಥವ ಅದ್ವೈತ ಮಠಗಳಿಗೆ ಹೋಗಲಾರಂಭಿಸಿದರೆ, ಅಲ್ಲಿನ ಆಚರಣೆಗಳನ್ನು, ನಂಬಿಕೆಗಳನ್ನು ಅನುಸರಿಸತೊಡಗಿದರೆ ಅದನ್ನು ಮತಾಂತರವೆಂದಲ್ಲದೆ ಏನೆಂದು ಕರೆಯಬೇಕು? ಅಷ್ಟಕ್ಕೂ ಹಿಂದೆಂದೂ ಹೀಗೆ ಮಾಡದ ಪುರೋಹಿತ ವರ್ಗವು, ಈಗ ಶೂದ್ರರಿಗೆ ವಿವೇಕವನ್ನು ತುಂಬುವ, ಅವರ ಆಚರಣೆಗಳನ್ನು ಮಾರ್ಪಡಿಸುವ, ಹೊಸ ಆಚರಣೆಗಳನ್ನು ಬಿತ್ತುವ, ಹೊಸ ನಂಬಿಕೆಗಳಲ್ಲಿ ಅವರನ್ನು ಬಂಧಿಸುವ ಕಾಯಕಕ್ಕೆ ಬಿದ್ದುದೇಕೆ? ಬದಲಾಗುತ್ತಿರುವ ಆರ್ಥಿಕ ಸಮೀಕರಣದಲ್ಲಿ ವಿದ್ಯಾವಂತ ಶೂದ್ರರು ತಮ್ಮ ಪಾರಂಪರಿಕ ಮನಸ್ಥಿತಿಯಿಂದ ಹೊರಬಂದು ವೈದಿಕ ಸಾಮಾಜದ ಸಂಕೊಲೆಗಳಿಂದ ಮುಕ್ತರಾಗಿ, ಸ್ವಾವಲಂಬನೆಯಿಂದ ಆರ್ಥಿಕವಾಗಿ ಸಧೃಢರಾಗತೊಡಗಿದಂತೆ ಪುರೋಹಿತ ಕಾಯಕಕ್ಕೆ ಉಳಿಗಾಲವಿಲ್ಲದಂತಾಯಿತು. ಹಲವರು ಈ ಪೌರೋಹಿತ್ಯವನ್ನು ತ್ಯಜಿಸಿ ಅನ್ಯ ಜೀವನಮಾರ್ಗವನ್ನು ಅರಸಿ ಹೋದರು; ಹೋಗಲಾಗದೆ ಉಳಿದವರು ಬದಲಾದ ಆರ್ಥಿಕ, ಸಾಮಾಜಿಕ ಪರಿಸ್ಥಿತಿಯಲ್ಲಿ ಪೌರೋಹಿತ್ಯವನ್ನು ಪುನರುಜ್ಜೀವನಗೊಳಿಸುವ ತನ್ಮೂಲಕ ತಮ್ಮ ಉಳಿವನ್ನು ಕಾಯ್ದುಕೊಳ್ಳುವ ಯೋಜನೆಗೆ ತೊಡಗಿದರು.
ಈ ಯೋಜನೆಯ ಹಂಚಿಕೆಯ ಫಲವಾಗಿ ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಜ್ಯೋತಿಷ್ಯ, ಜಾತಕ ಫಲ ಶೂದ್ರರ ಆವರಣದೊಳಕ್ಕೆ ಕಾಲಿಟ್ಟವು. ಇವುಗಳಲ್ಲಿನ ದೋಷಗಳ ಪರಿಹಾರಕ್ಕೆ ಹೋಮ, ಹವನ, ವೃತ, ಪೂಜೆಗಳು ಶೂದ್ರರ ಮನೆ, ಮನಗಳಲ್ಲಿ ಪ್ರಬಲವಾಗಿ ಪುನರುಜ್ಜೀವನಗೊಂಡು ಹೊಸ ಆಚರಣೆಗಳು, ನಂಬಿಕೆಗಳು   ಹೊಸ ತಲೆಮಾರನ್ನು ಬಂಧಿಸಿ ಆಧೀರರನ್ನಾಗಿಸಿವೆ. ಇಂಥಹ ಜಾಲದಲ್ಲಿ ಶೂದ್ರರ ಹೊಸತಲೆಮಾರು ಸಿಲುಕಿಕೊಂಡಷ್ಟು, ಸ್ವಾತಂತ್ರೋತ್ತರದಲ್ಲಿ ಪಾರಂಪರಿಕ ಮನಸ್ಥಿತಿಯಿಂದ ಹೊರಬಂದು ವೈದಿಕ ಸಾಮಾಜದ ಸಂಕೊಲೆಗಳಿಂದ ಮುಕ್ತರಾಗಿ, ಸ್ವಾವಲಂಬನೆಯಿಂದ ಆರ್ಥಿಕವಾಗಿ ಸಧೃಢವಾದ ಅವರ ಹಿಂದಿನ ತಲೆಮಾರು ಸಿಲುಕಲಿಲ್ಲ. ಹೊಸ ತಲೆಮಾರಿವರು ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರದ ಪ್ರಭಾವಕ್ಕೊಳಗಾಗಿ ಅಧೀರರಾಗಿ ತಮ್ಮ ಅಜ್ಜಂದಿರು ಕಟ್ಟಿ ನೂರಾರು ವರ್ಷ ಬಾಳಿ ಬದುಕಿದ ಮನೆಯ ಗೋಡೆಗಳನ್ನು ವಾಸ್ತುದೋಷವಿದೆ ಎಂದು ಒಡೆದು ಸ್ನಾನದ ಮನೆಯನ್ನು ಮಲಗುವ ಕೋಣೆಯನ್ನಾಗಿ ಪರಿವರ್ತಿಸುವಲ್ಲಿ ಅಥವ ತಮ್ಮ ಅಪ್ಪ-ಅಮ್ಮಂದಿರು ಇಟ್ಟ ಹೆಸರನ್ನು ಸಂಖ್ಯಾಶಾಸ್ತ್ರಜ್ಞರು ಹೇಳುವಂತೆ ಬದಲಾಯಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ.

ತಮ್ಮನ್ನು ಹೊಸದಾಗಿ ಆವರಿಸಿ, ಬಂಧಿಸಿರುವ ಹೊಸ ಆಚರಣೆಗಳು, ನಂಬಿಕೆಗಳು ಶೂದ್ರರ ಬದುಕನ್ನು ನಿರಂತರವಾಗಿ ಮತ್ತೆ ಪುರೋಹಿತ ವರ್ಗದ ಪ್ರಭಾವದ ದಾಸ್ಯದೊಳಕ್ಕೆ ನೂಕುತ್ತಿವೆ. ಹೀಗೆ ಬಿತ್ತಲ್ಪಟ್ಟ ಆಚರಣೆಗಳನ್ನು, ನಂಬಿಕೆಗಳನ್ನು ಶೂದ್ರರ ಹೊಸ ತಲೆಮಾರು ಅನುಸರಿಸತೊಡಗಿದರೆ ಮುಂದಿನ ಎರಡು ಮೂರು ಶತಮಾನಗಳವರೆಗೆ ಶೂದ್ರರು ತಮ್ಮ ಶ್ರಮದ ಫಲವನ್ನು ಅವರ ದೇವರುಗಳಿಗೆ, ಅವರ ಮಠಗಳಿಗೆ ಅರ್ಪಿಸಿ ತಮ್ಮ ಗಳಿಕೆಯ ಭಾಗವೊಂದನ್ನು ಕಾಣಿಕೆಯ, ದಕ್ಷಿಣೆಯ ರೂಪದಲ್ಲಿ ನಿರಂತರವಾಗಿ ಸಲ್ಲಿಸುವುದರಲ್ಲಿ ಸಂದೇಹವೇ ಇಲ್ಲ. ಮುಂದುವರಿದು, ವ್ಯವಸ್ಥಿತವಾಗಿ ಶೂದ್ರರ ಒಡನಾಟ ಅವರ ಮಠಗಳಿಗೆ, ಅವರ ದೇವರುಗಳಿಗೆ ನಿರಂತರವಾಗಿ ಇರುವಂತೆ ಅವರನ್ನು ಹೊಸ-ಹೊಸ ನಂಬಿಕೆಗಳಲ್ಲಿ, ಅಚರಣೆಗಳಲ್ಲಿ ಬಂಧಿಸಲಾಗುವುದು. ಒಟ್ಟಿನಲ್ಲಿ  ಪೌರೋಹಿತ್ಯವು  ತನ್ನ ಹೊಸ ನೆಲೆಯಲ್ಲಿ ಪುನರುಜ್ಜೀವನ ಗೊಂಡು, ವೈದಿಕ ಸಂಕೊಲೆಗಳಿಂದ ಮುಕ್ತರಾದ ಶೂದ್ರರನ್ನೂ ಮೌಢ್ಯದ ದಾಸ್ಯದೊಳಕ್ಕೆ ಪುನಃ ತಳ್ಳುತ್ತಿದೆ.
ತಮ್ಮ ಉಳಿವಿಗಾಗಿ ಧಾರ್ಮಿಕ ಕೇಂದ್ರಗಳು ಪೊರೆಯುವ  ಆಚರಣೆಗಳು, ನಂಬಿಕೆಗಳು ಬದಲಾಗುತ್ತಿರುವ ಸಮಾಜಕ್ಕೆ ಕಂಟಕಕಾರಿಯಾಗುವಂತಿದ್ದರೂ ಅವುಗಳನ್ನು ಸುಧಾರಿಸುವ, ಬದಲಾಯಿಸುವ ಅಥವ ನಿಲ್ಲಿಸುವ ಯೋಚನೆಯನ್ನು ಮಾಡುವುದಿಲ್ಲ. ಬದಲಿಗೆ ದೇವರ ಹೆಸರಿನಲ್ಲಿ, ಭಕ್ತರ ಶ್ರಮದ ಫಲವನ್ನು ದೇವರ ಕೃಪೆಗೆ ಆರೋಪಿಸುವಇನ್ನಷ್ಟು ಮೌಢ್ಯವನ್ನು ಸೃಷ್ಟಿಸಿ ಜನರು ಸದಾ ನಂಬಿಕೆಗಳ, ಮೌಢ್ಯಗಳ, ತನ್ಮೂಲಕ ಧಾರ್ಮಿಕ  ಕೇಂದ್ರಗಳ ಸುತ್ತ ಗಿರಕಿ ಹೊಡೆಯುವಂತೆ ನಂಬಿಕೆಗಳ, ಆಚರಣೆಗಳ ಜಾಲವನ್ನೇ ಹೆಣೆಯಲಾಗುತ್ತಿದೆ. ಹೀಗೆ ಆರ್ಥಿಕ ನೆಲೆಯಲ್ಲಿ ಪುನರುಜ್ಜೀವನಗೊಳ್ಳುವ ಮೌಢ್ಯವು ಬಲಿಷ್ಟವಾಗಿದ್ದು ಎಲ್ಲ ರೀತಿಯಲ್ಲೂ ತನ್ನನ್ನು ರಕ್ಷಿಸಿಕೊಳ್ಳುವ ತಂತ್ರಗಾರಿಕೆಯನ್ನು, ಹಂಚಿಕೆಯನ್ನು ಹೊಂದಿರುತ್ತದೆ. ದೇಹದೊಳಕ್ಕೆ ಸೇರಿಕೊಳ್ಳುವ ವೈರಸ್ ಜೀವಕೋಶದೊಳಗೆ ಹೊಕ್ಕು ತನ್ನ ತದ್ರೂಪನ್ನೇ ಸೃಷ್ಟಿಸುವಂತೆ, ಡಿ.ಎನ್. ಅನ್ನು ಮಾರ್ಪಡಿಸುವಂತೆ, ಇವು ಜನರ ಮನದಾಳಕ್ಕಿಳಿದು, ಜನರೇ ಸ್ವಯಂ ಇವುಗಳನ್ನು ಪೊರೆದು ಪೋಷಿಸುವಂತೆ ಅವರ ಮನಸ್ಸನ್ನು ಆವರಿಸಿ ಬಿಡುತ್ತವೆ. ಇವು ದೇಶದ ಕಾನೂನನ್ನೂ ಯಾಮಾರಿಸಿ, ರಂಗೋಲಿಯ ಕೆಳಗೆ ತೂರುವಷ್ಟು ನಯವಂಚಕತನವನ್ನು ಮೈಗೂಡಿಸಿಕೊಂಡಿವೆ. ಮಡೆ ಸ್ನಾನ, ಪಂಕ್ತಿ ಭೇಧ, ವರ್ಣಾಶ್ರಮಾಚರಣೆಗಳೆಲ್ಲವೂ  ಇಂಥಹ ವ್ವವಸ್ಥಿತ ಜಾಲದ ಸುಳಿಗೆ ಸಿಕ್ಕ ಕರಾಳ, ಅಮಾನವೀಯ, ತಾರತಮ್ಯದ ಆಚರಣೆಗಳಾಗಿವೆ. ಇವುಗಳ ಪೋಷಕರು ಭಾರತದ ಸಮೃದ್ಧ ಸಂಸ್ಕೃತಿಯನ್ನು ಕಾಪಿಡುವ, ಸಂರಕ್ಷಿಸುವ ಕಾನೂನಿನಡಿಯಲ್ಲಿ ನ್ಯಾಯಾಲಯಗಳನ್ನು ದಿಕ್ಕು ತಪ್ಪಿಸಿ ಈ ಕಾನೂನಿನಡಿಯಲ್ಲೇ ಆಸರೆ ಪಡೆಯುವ, ಉಳಿಯುವ ಹಂಚಿಕೆಯಲ್ಲಿವೆ.
ಇದನ್ನು ಗ್ರಹಿಸಿಯೇ ಕುವೆಂಪು ಹೇಳಿದ್ದು:

ನೂರು ದೇವರನೆಲ್ಲ ನೂಕಾಚೆ ದೂರ
ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೇ ದೇವಿ ನಮಗಿಂದು
ಪೂಜಿಸುವ ಬಾರಾ ಬಾರಾ....

ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು
ಹಾವುಗಳಿಗೆ ಹಾಲೆರೆದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು
ದಾಸರನು ಪೂಜಿಸಿಯೇ ದಾಸ್ಯವಾಯ್ತು
ಭಾರತಾಂಬೆಯೇ ದೇವಿ....

ಗುಡಿಯೊಳಗೆ ಕಣ್ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಘಂಟೆ ಜಾಗಟೆಗಳಿಂ ಬಡಿದು ಕುತ್ತಿಗೆ ಹಿಡಿದು
ಕಡಲಡಿಗೆ ತಳ್ಳಿರೈ ಶಂಖದಿಂ
ಭಾರತಾಂಬೆಯೇ ದೇವಿ ನಮಗಿಂದು...

ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯನಿಂದು ಕೂಗಬೇಕು
ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಬಲೆಯನು ಒಯ್ದು
ಚಳಿಯು ಮಳೆಯಲಿ ನವೆವ ತಾಯ್ಗೆ ಹಾಕು.
ಭಾರತಾಂಬೆಯೇ ದೇವಿ ನಮಗಿಂದು
ಪೂಜಿಸುವ ಬಾರಾ ಬಾರಾ.