Thursday, November 27, 2014

ಸಂಸ್ಕೃತಿಯ ಪಹರೆಯೊಳಗೆ ಕಮರಿದ ಹೂಗಳು

ದೆಹಲಿಯ ಶಹರದಲ್ಲಿ ತಂದೆಯೊಬ್ಬ ಮಗಳ ಕಾಲುಗಳನ್ನು ಬಿಗಿಯಾಗಿ ಹಿಡಿಯುತ್ತಾನೆ; ಹೆತ್ತ ತಾಯಿಯೇ ಮಗಳ ಉಸಿರುಗಟ್ಟುತ್ತಾಳೆ, ಹೆತ್ತಮ್ಮಗಳ ಕೈಯಾರೆ ಮಗಳು ವಿಲವಿಲ ಒದ್ದಾಡಿ ಸಾಯುತ್ತಾಳೆ; ಕುಟುಂಬದ, ವಂಶದ ಮರ್ಯಾದೆ ಉಳಿಯಿತು ಎಂಬ ಹಮ್ಮಿನಲ್ಲಿ ಸಂಬಂಧಿಕರು, ಪೋಷಕರು ನಿಟ್ಟುಸಿರು ಬಿಡುತ್ತಾರೆ.




ದೆಹಲಿಯ ಕಿರುಗಲ್ಲಿಯೊಂದರಲ್ಲಿ ಸಾಲು ಸಾಲಾಗಿ ತೆರೆದುಕೊಳ್ಳುವ ಮಾಂಸದಂಗಡಿಗಳು, ರಿಯಲ್ ಎಸ್ಟೇಟ್ ಬ್ರೋಕರುಗಳ ಅಡ್ಡೆಗಳು; ಇವನ್ನೆಲ್ಲ ಮೈಮೇಲೆ ಹೊದ್ದುಕೊಂಡಂತಿರುವ, ದೆಹಲಿಯ ದ್ವಾರಕಾ ಎಂಬ ಮಧ್ಯಮ ವರ್ಗದ ಕಾಲನಿಗೆ ಅಂಟಿಕೊಂಡಿರುವ ಭಾರತ್ ವಿಹಾರ್ ಎಂಬ ಹಳ್ಳಿಗಾಡಿನಂತಹ ಕಾಲನಿಯಲ್ಲಿ ರಾಜಸ್ಥಾನ ಮೂಲದ ಸಂಪ್ರದಾಯಸ್ಥ ಯಾದವ ಕುಟುಂಬದ ಹೆಣ್ಣುಮಗಳೊಬ್ಬಳನ್ನು ಪ್ರೌಢಶಾಲೆಯ ನಂತರ, ಆಕೆಯ ಪೋಷಕರು, ಅವಳು ತನ್ನ ಆರನೆಯ ವಯಸ್ಸಿನಲ್ಲಿ ನೋಡಿದ್ದ ಸಂಬಂಧಿಕರ ಹುಡುಗನೊಂದಿಗೆ ಮದುವೆ ಮಾಡುವ ಪ್ರಸ್ತಾಪ ಮುಂದಿಡುತ್ತಾರೆ. ದೆಹಲಿಯಲ್ಲಿ ಬೆಳೆದ ಆ ಹುಡುಗಿ ಕಾಲೇಜಿಗೆ ಹೋಗುವ, ತನ್ನಮನಸ್ಸಿಗೆ ಹಿಡಿಸುವ ಉಡುಗೆ ತೊಡುವ, ತನ್ನ ವಯಸ್ಸಿನ ಗೆಳೆಯರ ಒಡನಾಟದ ಸಂಭ್ರಮದಲ್ಲೇ ಇರುತ್ತಾಳೆ. ಹೇಗೋ ತನ್ನ ಅಪ್ಪ ಅಮ್ಮಂದಿರನ್ನು ಒಪ್ಪಿಸಿ ದೆಹಲಿಯ ಪ್ರತಿಷ್ಠಿತ ಕಾಲೇಜೊಂದಕ್ಕೆ ಸೇರುತ್ತಾಳೆ. ಕಾಲೇಜಿನಲ್ಲಿ ಆಭಿಶೇಕ್ ಸೇತ್  ಎಂಬ ಹುಡುಗನೊಂದಿಗೆ ಪ್ರೇಮಾಂಕುರವಾಗುತ್ತದೆ. ಮುಂದೆ, ಅಭಿಶೇಕ್ ಸೇತ್ ಶಿಕ್ಷಣ ಮುಗಿಸಿ ರಾಷ್ಟ್ರಪತಿ ಭವನದಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್ ಆಗಿ ಕೆಲಸಕ್ಕೆ ಸೇರುತ್ತಾನೆ.  ತನ್ನ ಪ್ರಿಯತಮೆಯೊಂದಿಗೆ ಜೀವನವನ್ನು ಕಟ್ಟಿಕೊಳ್ಳುವ ಕನಸು ಕಾಣುತ್ತಾನೆ. ಈ ನಡುವೆ ಭಾವನಾಳ ಮನೆಯಲ್ಲಿ ಅದೇ ಮದುವೆಯ ಪ್ರಸ್ತಾಪವಾಗುತ್ತದೆ; ಅವಳ ಇಚ್ಛೆಯನ್ನು ಲೆಕ್ಕಿಸದೆ ನಿಶ್ಚಿತಾರ್ಥವೂ ನಿಗದಿಯಾಗುತ್ತದೆ. ಇತ್ತ ಅಭಿಶೇಕ್ ಮತ್ತು  ಭಾವನಾ ತಮ್ಮ ಕುಟುಂಬಗಳು ಅವರ ಪ್ರೇಮಕ್ಕೆ ಸಮ್ಮತಿ ನೀಡುವುದಿಲ್ಲ ಎಂಬ ವಿಷಯ ಖಾತ್ರಿಯಾಗುತ್ತಿದ್ದಂತೆ ಆತಂಕಗೊಳ್ಳುತ್ತಾರೆ; ಅವಳ ನಿಶ್ಚಿತಾರ್ಥದ ದಿನ ಹತ್ತಿರವಾದಂತೆ  ಚಡಪಡಿಸತೊಡಗುತ್ತಾರೆ. ಒಮ್ಮೆ ಮದುವೆ ಮಾಡಿಕೊಂಡರೆ ಕ್ರಮೇಣ ಪೋಷಕರು ಒಪ್ಪಿಕೊಳ್ಳುತ್ತಾರೆ ಎಂಬ ಅಭಿಪ್ರಾಯಕ್ಕೆ ಬರುತ್ತಾರೆ; ನಂತರ ದೇವಸ್ಥಾನವೊಂದರಲ್ಲಿ ಮದುವೆಯಾಗಿ ಅಭಿಶೇಕನ ಮನೆಗೆ ಬರುತ್ತಾರೆ. ಅಭಿಶೇಕನ ಅಪ್ಪ ಅಮ್ಮರಿಗೆ ಒಮ್ಮೆಗೇ ಅಚ್ಚರಿ, ಗಾಬರಿ. ಇದ್ದಕ್ಕಿಂದಂತೆ ಒಬ್ಬಳು ಹುಡುಗಿಯನ್ನು ಧುತ್ತನೆ ನಿಲ್ಲಿಸಿ, "ಇವಳು ನಿಮ್ಮ ಸೊಸೆ, ನನ್ನ ಹೆಂಡತಿ" ಎಂದು ಹೇಳುತ್ತಿರುವ ಮಗನ ಮಾತನ್ನು ನಂಬದವರಾಗುತ್ತಾರೆ.  ಮಗನ ಈ ನಡೆಯಿಂದ ಬೇಸರವಾದರೂ ತೋರಗೊಡದೆ, ಸಾವರಿಸಿಕೊಂಡು ವಿಷಯವೇನೆಂದು ತಿಳಿದುಕೊಳ್ಳುತ್ತಾರೆ. ನಂತರ ಹುಡುಗಿಯ ಅಪ್ಪ ಅಮ್ಮರಿಗೆ ಫೋನ್ ಮಾಡಿ ವಿಷಯ ತಿಳಿಸುತ್ತಾರೆ.  ಭಾವನಾರ ಪೋಷಕರು ಧೃತಿಗಡದೆ ಅಭಿಶೇಕನ ಮನೆಗೆ ಬಂದು ಇನ್ನೊಂದು ವಾರದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಡುವುದಾಗಿ ನಂಬಿಸಿ ಮಗಳನ್ನು ತಮ್ಮ ಮನೆಗೆ ಕರೆದೊಯ್ಯುತ್ತಾರೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ಭಾವನಾ ತನ್ನ ಪ್ತಿಯಕರನನ್ನು ಅಗಲಿ ವಾಪಾಸು ತನ್ನ ಮನೆಗೆ ಬರುತ್ತಾಳೆ. ಮನೆಯಲ್ಲಿ ಮೆಲ್ಲಗೆ ಅಪ್ಪ, ಅಮ್ಮ, ಚಿಕ್ಕಪ್ಪ ಮತ್ತು ಉಳಿದ ಎಲ್ಲರ ಸಮ್ಮುಖದಲ್ಲಿ ಭಾವನಾಳ  ಅಂತರ ಜಾತಿ ವಿವಾಹದ ಆಗು ಹೋಗುಗಳ ವಿಷಯ ಚರ್ಚೆಗೆ ಬರುತ್ತದೆ. ಸಂಬಂಧಿಕರೆಲ್ಲರೂ ಅದು ತಮ್ಮ ಮೇಲೆ, ತಮ್ಮ ಕುಟುಂಬದ ಮೇಲೆ, ಕಡೆಗೆ ತಮ್ಮ ವಂಶದ ಮೇಲೆಯೇ ಆದಂತಹ ಅತ್ಯಾಚಾರ, ಅದರಿಂದಾದ ಅವಮಾನ ಎಂದು ಭಾವಿಸುತ್ತಾರೆ. ಈ ಘಟನೆಯು ತಮ್ಮ ವಂಶಸ್ಥರ ಎಲ್ಲ ಹೆಣ್ಣು ಮಕ್ಕಳಮೇಲೆ ಕಳಂಕ ತಂದು ಮುಂದೆ ಅವರ ವಿವಾಹಕ್ಕೆ ಅಡ್ಡಿ ತರಬಹುದೆಂಬ ಅಂದಾಜಿಗೆ ಬರುತ್ತಾರೆ. ಇನ್ನು ಇದನ್ನು ತಪ್ಪಿಸಲು ಈ ಮದುವೆಯನ್ನು ಕಡೆಗಣಿಸಿ ತಮ್ಮ ಜಾತಿಯೊಳಗೇ ಮರು ಮದುವೆ ಮಾಡುವ ಹಂಚಿಕೆ ಸಿದ್ಧಪಡಿಸುತ್ತಾರೆ. ಇದನ್ನು ಕೇಳಿದ ಭಾವನ ಸಿಡಿದೇಳುತ್ತಾಳೆ; ತಾನು ಪ್ರಾಪ್ತ ವಯಸ್ಕಳಾಗಿದ್ದು, ತನ್ನ ಇಚ್ಛೆಯಂತೆ, ತನ್ನ ಹಕ್ಕಿನಂತೆ ಕಾನೂನಿನಡಿಯಲ್ಲಿ ತಾನು ಮದುವೆಯಾಗಿದ್ದು ಅದನ್ನು ತಪ್ಪಿಸಲು ಯಾರಿಗೂ ಹಕ್ಕಿಲ್ಲವೆಂದು ವಾದಿಸುತ್ತಾಳೆ; ಹಾಗೇನಾದರೂ ಮಾಡಿದರೆ ಮನೆಯವರನ್ನು, ಕುಟುಂಬದವರನ್ನು ಕೋರ್ಟಿಗೆ ಎಳೆಯುವುದಾಗಿ ಹೇಳುತ್ತಾಳೆ. ಈ ವಾಗ್ಯುದ್ಧದ ನಡುವೆ ಭಾವನಾಳ ಚಿಕ್ಕಪ್ಪ ಅಭಿಶೇಕ್ ಗೆ ಫೋನ್ ಮಾಡಿ ಅವಳನ್ನು ಮರೆಯದಿದ್ದರೆ ಶೂಟ್ ಮಾಡುವುದಾಗಿ ಧಮಕಿಹಾಕುತ್ತಾನೆ.  ಇದಾವುದಕ್ಕೂ ಭಾವನಾ ಜಗ್ಗುವುದಿಲ್ಲ. ಅಂದಿನ ರಾತ್ರಿ ಅವಳ ಅಪ್ಪ, ಅಪ್ಪ, ಚಿಕ್ಕಪ್ಪ ಮತ್ತು ಸಂಬಂಧಿಕರೆಲ್ಲರೂ ಸೇರಿ ತಮ್ಮ ಕುಟುಂಬದ, ವಂಶದ ಮರ್ಯಾದೆಯನ್ನು ಕಾಪಾಡುವ  ಕರಾಳ ಹಂಚಿಕೆಗೆ ತಯಾರಾಗುತ್ತಾರೆ. ರಾತ್ರಿ ಎರಡು ಗಂಟೆಯ ಸಮಯದಲ್ಲಿ ಭಯಾನಕವಾಗಿ ಅವಳನ್ನು ಉಸಿರುಗಟ್ಟಿ ಸಾಯಿಸಲಾಗುತ್ತದೆ. ಕುಟುಂಬದ, ವಂಶದ ಮರ್ಯಾದೆ ಉಳಿಯಿತು ಎಂಬ ಹಮ್ಮಿನಲ್ಲಿ ಸಂಬಂಧಿಕರು, ಪೋಷಕರು ನಿಟ್ಟುಸಿರು ಬಿಡುತ್ತಾರೆ. 

ಏನಿದು ಈ ಮರ್ಯಾದೆ? ತನ್ನ ಕರುಳ ಬಳ್ಳಿಯನ್ನೇ ಕೊಂದು ಉಳಿಸಿಕೊಳ್ಳುವ ಈ ಮರ್ಯಾದೆ ಎಂಥದ್ದು? ಇವೆಲ್ಲವನ್ನು ಕೆದಕಿ ಕುಳಿತರೆ ನಾವು ನಿಂತಲ್ಲಿಗೇ ಬಂದು ನಿಲ್ಲುತ್ತೇವೆ. ಹೆಮ್ಮೆಯಿಂದ ನಮ್ಮದೆಂದು ಹೇಳಿಕೊಳ್ಳುವ ನಮ್ಮ ಸಂಸ್ಕೃತಿಯು ಮೊದಲಿಂದಲೂ ಹೆಣ್ಣುಮಕ್ಕಳನ್ನು ಕುಟುಂಬದ, ಗೌರವದ ಸ್ವತ್ತುಗಳನ್ನಾಗಿ ಪೋಷಿಸಿಕೊಂಡು ಬಂದಿದೆ. ಹೀಗಾಗಿ ನಮ್ಮ ಸಮಾಜವು ಪುರುಷ ಪ್ರಧಾನವಾಗಿ, ಪುರುಷರು ಅವರನ್ನು ತಮ್ಮ  ಪ್ರತಿಷ್ಠೆಗೆ, ಅಲಂಕಾರಕ್ಕೆ ಶೋಭಿಸುವಂತೆ ಆಭರಣಗಳಂತೆ, ಸ್ವತ್ತುಗಳಂತೆ ಬಳಸಿಕೊಂಡು ಬರುತ್ತಿದ್ದಾರೆ. ಇವೆಲ್ಲವೂ ಕಾಲಾನಂತರದಲ್ಲಿ ಸರ್ವೋತ್ತಮ ಮೌಲ್ಯಗಳಾಗಿ, ತನ್ಮೂಲಕ ಪುರುಷರ ಪ್ರತಿಷ್ಠೆಯ ಪ್ರತೀಕಗಳಾಗಿ ಎಲ್ಲರ ಮನಸ್ಸುಗಳನ್ನು ಗಾಢವಾಗಿ ಆವರಿಸಿ ಕುಂತಿವೆ. ಸ್ತ್ರೀಯರಲ್ಲೂ ತಮ್ಮಲ್ಲಿರುವಂತೆ ಒಂದು ಜೀವವಿದೆ, ಹೃದಯವಿದೆ, ಅದರೊಳಗೊಂದು ಆಸೆಯಿದೆ, ಸ್ವಚ್ಛಂದವಾಗಿ ಹಕ್ಕಿಯಂತೆ ಹಾರಾಡುವ ಬಯಕೆಯಿದೆ ಎಂದು ಎಂದೂ ಭಾವಿಸಿದಂತಿಲ್ಲ. ಹಿಂದೆ ಯುದ್ಧನಿರತ ಮಹಾರಾಜರು, ಸಾಮ್ರಾಟರಿಂದ ತಮ್ಮ ರಾಜ್ಯ ಉಳಿಸಿಕೊಳ್ಳಲು ಅವರ ಅಧೀನಕ್ಕೆ ಒಳಪಟ್ಟು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ತಮ್ಮ ಅಧೀನತೆಯ ಸಂಕೇತವಾಗಿ ಸಾಮ್ರಾಟರಿಗೆ ಉಪ ಪತ್ನಿಯರನ್ನಾಗಿ ಮದುವೆ ಮಾಡಿ ಕೊಡುವ ಸಂಪ್ರದಾಯವಿತ್ತು. ರಾಜ್ಯವೊಂದರ ರಾಜಕುಮಾರನ ರಾಣಿಯಾಗಿ, ಮುಂದೆ ಆ ರಾಜ್ಯದ ಪಟ್ಟದ ರಾಣಿಯಾಗಬೇಕೆಂದು  ಹಂಬಲಿಸುತ್ತಿದ್ದ ರಾಜ ಮನೆತನದ ಹೆಣ್ಣುಮಕ್ಕಳು ಸಾಮ್ರಾಟನ ಜನಾನಾದಲ್ಲಿ ಇಂಥ ಅದೆಷ್ಟೋ  ಉಪ ಪತ್ನಿಯರೊಂದಿಗೆ ಸಾಮ್ರಾಟನ ಲಕ್ಷ್ಯವಿಲ್ಲದೆ ಕಾಲ ದೂಡಬೇಕಾಗುತ್ತಿತ್ತು. ತಮ್ಮ ಪಿತೃಗಳ ರಾಜಕಾರಣದಲ್ಲಿ ಈ ನತದೃಷ್ಟ ರಾಜ ಕುವರಿಯರು ಜೀವವಿಲ್ಲದ ಪಗಡೆಯ ಕಾಯಿಗಳಾಗಿ ಹೋಗುತ್ತಿದ್ದರು. ಹೀಗೆಯೇ ಮೊಘಲ್ ಸಾಮ್ರಾಟರ ಕುಟುಂಬದ ರಾಜಕುವರಿಯರು  ಮದುವೆಯಾಗಕೂಡದೆಂಬ ವಿಚಿತ್ರ ನಿಯಮವಿತ್ತು! ತಮ್ಮ ಮೋಜಿಗೆ ನೂರಾರು ಉಪ ಪತ್ನಿಯರನ್ನು ತಮ್ಮ ಜನಾನದಲ್ಲಿ ಇಟ್ಟುಕೊಳ್ಳುತ್ತಿದ್ದ ಮೊಘಲ್ ಸಾಮ್ರಾಟರು, ಹಿಂದಿನ ಯಾವುದೋ ಪದ್ದತಿಗೆ ಗಂಟುಬಿದ್ದು ತಮ್ಮ ಪುತ್ರಿಯರಿಗೆ ಮದುವೆ ಮಾಡದಷ್ಟು ನಿರ್ದಯಿಗಳಾಗಿದ್ದರು.  ತನ್ನ ಹದಿನಾಲ್ಕನೇ ಮಗುವಿನ ಪ್ರಸವದಲ್ಲಿ ತೀರಿಕೊಂಡ ಮಹಾರಾಣಿ ಮುಮ್ತಾಜ್ ಮಹಲಳ ಪ್ರೀತಿಯ ನೆನಪಿಗೆ ಭವ್ಯವಾದ ತಾಜ್ ಮಹಲನ್ನೇ ಕಟ್ಟುವ ಸರ್ವ ಸಾಮ್ರಾಟನಾದ ಶಹಜಹಾನ್  ಇಂಥ ಸಂಪ್ರದಾಯಕ್ಕೆ ಕಟ್ಟುಬಿದ್ದು ತನ್ನ ಹೆಣ್ಣುಮಕ್ಕಳಿಗೆ ಮದುವೆ ಮಾಡದೆ ಹೋಗುತ್ತಾನೆ. ಪರಮೋಚ್ಛ ಅಧಿಕಾರವನ್ನು ಹೊಂದಿದ್ದ ಸರ್ವಶಕ್ತನಾಗಿದ್ದ ಶಹಜಹಾನ್, ತನ್ನ ಉಳಿದ ಪತ್ನಿಯರನ್ನು ಕಡೆಗಣಿಸಿ, ತನ್ನ ಎಲ್ಲ ಪುತ್ರಿಯರಲ್ಲಿ ಅತ್ಯಂತ ಪ್ರೀತಿಗೆ ಪಾತ್ರಳಾದ ಮೊದಲ ಮಗಳು ಜಹಾನರಾಳನ್ನು ಮಹಾರಾಣಿಯನ್ನಾಗಿ ಮಾಡುತ್ತಾನೆ; ಆದರೆ ಸಾಮ್ರಾಟ್ ಅಕ್ಬರನ ಕಾಲದಲ್ಲಿ ಹುಟ್ಟಿದ ಸಂಪ್ರದಾಯವೊಂದಕ್ಕೆ ಗಂಟುಬಿದ್ದು ಅವಳು ಅದಮ್ಯವಾಗಿ ಪ್ರೀತಿಸುತ್ತಿದ್ದ ಒಬ್ಬ ಯುರೋಪಿಯನ್ ವೈದ್ಯನನ್ನು ಮದುವೆಯಾಗಲು ಅವಕಾಶ ಕಲ್ಪಿಸಲೇ ಇಲ್ಲ. ಅವಳು ಮದುವೆಯಾಗದೆ ಅವನ ನೆನಪಿನಲ್ಲಿಯೇ ಉಳಿದಳು. ತನ್ನ ರಾಜಭೋಗವನ್ನು ಶಪಿಸಿದಳು, ತಾನು ಸತ್ತ ನಂತರ ತನ್ನ ಗೋರಿಯು ಎಲ್ಲ ರಾಜಭೋಗದಿಂದ ಮುಕ್ತವಾಗಿರುವಂತೆ ಬಯಸಿ ಗುಂಬಜ್ ಗಳಿಲ್ಲದ ಸಾಮಾನ್ಯ ಜನರ ಗೋರಿಯಂತೆ  ಸದಾ ಆಕಾಶವನ್ನು ನೋಡುವಂತಿರಲಿ ಎಂದು ಬಯಸುತ್ತಾಳೆ. ಸಾಮ್ರಾಜ್ಞಿಯಾಗಿದ್ದ ಜಹಾನರಾಳ ಗೋರಿಯು ಇಂದಿಗೂ ದೆಹಲಿಯಲ್ಲಿ ಗುಂಬಜ್ ಗಳಿಲ್ಲದ ಸಾಮಾನ್ಯ ಗೋರಿಯಂತೆಯೇ ಇದೆ. 


ನಮ್ಮ ಒಳಿತಿಗೆ ಇಂದು ನಾವು ಕಟ್ಟಿಕೊಳ್ಳುವ ಆಚರಣೆಗಳು ಕಾಲಾನಂತರದಲ್ಲಿ ಬಲಿಷ್ಠ ಸಂಪ್ರದಾಯಗಳಾಗಿ, ನಮ್ಮ ಸಂಸ್ಕೃತಿಯ ಭಾಗವಾಗಿ ನಮ್ಮ ಕಾಲನ್ನೇ ಕಚ್ಚುವ ಹಲ್ಲಾಗುತ್ತಿವೆ.
ಸಂಸ್ಕೃತಿಯು ಆಕಳ ಕೆಚ್ಚಲಿನಂತಿರದೆ ಹುಲಿಯ ಹಲ್ಲಾಯಿತೆ?  
ಖಲೀಲ್ ಗಿಬ್ರಾನನ ಈ ಸಾಲುಗಳು ನೆನಪಾಗುತ್ತವೆ:
Your children are not your children.
They are the sons and daughters of Life's longing for itself.
They come through you but not from you,
And though they are with you yet they belong not to you.

You may give them your love but not your thoughts,
For they have their own thoughts.
You may house their bodies but not their souls,
For their souls dwell in the house of tomorrow,
which you cannot visit, not even in your dreams.
You may strive to be like them,
but seek not to make them like you.
For life goes not backward nor tarries with yesterday.

You are the bows from which your children
as living arrows are sent forth.
The archer sees the mark upon the path of the infinite,
and He bends you with His might
that His arrows may go swift and far.
Let your bending in the archer's hand be for gladness;
For even as He loves the arrow that flies,
so He loves also the bow that is stable.